ಮತಾಂತರದ ಆರೋಪ: ಉತ್ತರಪ್ರದೇಶ ಎಟಿಎಸ್‌ನಿಂದ ಇಬ್ಬರ ಬಂಧನ

Update: 2021-06-21 18:14 GMT

ಲಕ್ನೊ, ಜೂ.21: ರಾಷ್ಟ್ರವ್ಯಾಪಿ ಮತಾಂತರದ ಜಾಲವನ್ನು ತಾನು ಭೇದಿಸಿದ್ದು, ಇಬ್ಬರನ್ನು ಬಂಧಿಸಿರುವುದಾಗಿ ಉತ್ತರಪ್ರದೇಶ ಪೊಲೀಸರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಸೋಮವಾರ ತಿಳಿಸಿದೆ.

ಬಂಧಿತ ಆರೋಪಿಗಳನ್ನು ಮುಫ್ತಿ ಖಾಝಿ ಜಹಾಂಗೀರ್ ಖಾಸ್ಮಿ ಹಾಗೂ ಮುಹಮ್ಮದ್ ಉಮರ್ ಗೌತಮ್ ಎಂದು ಗುರುತಿಸಲಾಗಿದೆ. ಇಬ್ಬರೂ ದಕ್ಷಿಣ ದಿಲ್ಲಿಯ ಜಾಮಿಯಾ ನಗರದ ನಿವಾಸಿಗಳು. ಈ ಪೈಕಿ ಉಮರ್ ಗೌತಮ್ 35 ವರ್ಷಗಳ ಹಿಂದೆ ಇಸ್ಲಾಮ್ ಸ್ವೀಕರಿಸಿದ್ದು ಅವರ ಮೂಲ ಹೆಸರು ಶ್ಯಾಮ್ ಪ್ರತಾಪ್ ಸಿಂಗ್ ಗೌತಮ್ ಎಂದು ತಿಳಿದುಬಂದಿದೆ.

ಕಿವುಡ ಮಕ್ಕಳು ಹಾಗೂ ಮಹಿಳೆಯರನ್ನು ಇಸ್ಲಾಮಿಗೆ ಮತಾಂತರಗೊಳಿಸುವಲ್ಲಿ ಇವರು ಭಾಗಿಯಾಗಿದ್ದಾರೆ. ಇವರು ಇದುವರೆಗೆ ಸಾವಿರಕ್ಕೂ ಅಧಿಕ ಮಂದಿಯನ್ನು ಮತಾಂತರ ಗೊಳಿಸಿದ್ದಾರೆ. ನೊಯ್ಡಾದ ಕಿವುಡ ಹಾಗೂ ಅಂಧ ಶಾಲೆಯ 12ಕ್ಕೂ ಅಧಿಕ ಮಕ್ಕಳನ್ನು ಇವರು ಮತಾಂತರಗೊಳಿಸಿದ್ದಾರೆ ಎಂದು ಉತ್ತರಪ್ರದೇಶ ಪೊಲೀಸರು ಆರೋಪಿಸಿದ್ದಾರೆ. ರಾಜ್ಯದ ನೂತನ ಮತಾಂತರ ವಿರೋಧಿ ಕಾಯ್ದೆ ಅಡಿಯಲ್ಲಿ ಗೋಮತಿನಗರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಇಸ್ಲಾಮಿಕ್ ದಅವಾ ಕೇಂದ್ರದ ಅಧ್ಯಕ್ಷರ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮತಾಂತರ ಜಾಲಕ್ಕೆ ವಿದೇಶದಿಂದ ಆರ್ಥಿಕ ನೆರವು ದೊರಕಿರುವ ಬಗ್ಗೆ ನಮ್ಮಲ್ಲಿ ಪುರಾವೆ ಇದೆ ಎಂದು ಉತ್ತರಪ್ರದೇಶದ ಎಡಿಜಿ (ಕಾನೂನು ಹಾಗೂ ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News