​ಕೋವಿಡ್ ಲಸಿಕೆ ನೀಡಿಕೆ: ಇತರ ದೇಶಗಳಿಗೆ ಹೋಲಿಸಿದರೆ ಭಾರತ ಎಲ್ಲಿದೆ ಗೊತ್ತೇ ?

Update: 2021-06-22 04:30 GMT
ಫೋಟೊ : PTI

ಹೊಸದಿಲ್ಲಿ: ಕೋವಿಡ್-19 ವಿರುದ್ಧದ ಲಸಿಕೆ ನೀಡುವಲ್ಲಿ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ 30 ದೇಶಗಳ ಪೈಕಿ ಭಾರತ 16ನೇ ಸ್ಥಾನದಲ್ಲಿದೆ. ದೇಶದಲ್ಲಿ ಜೂನ್ 19ರವರೆಗೆ ಪ್ರತಿ 100 ಮಂದಿಯ ಪೈಕಿ 19.6 ಮಂದಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗಿದೆ. ಆದರೆ ಮೊದಲ ಸ್ಥಾನದಲ್ಲಿರುವ ಬ್ರಿಟನ್‌ನಲ್ಲಿ ಈ ಪ್ರಮಾಣ 108.7ರಷ್ಟಿದೆ.

ಆದರೆ ಎರಡೂ ಡೋಸ್‌ಗಳನ್ನು ಪಡೆದಿರುವವರ ಪ್ರಮಾಣವನ್ನು ನೋಡಿದರೆ ಈ ಅಂತರ ಮತ್ತಷ್ಟು ಅಧಿಕ. ಬ್ರಿಟನ್‌ನಲ್ಲಿ ಶೇಕಡ 45.8ರಷ್ಟು ಮಂದಿಗೆ ಎರಡೂ ಡೋಸ್‌ಗಳು ಲಭ್ಯವಾಗಿದ್ದರೆ, ಭಾರತದಲ್ಲಿ ಈ ಪ್ರಮಾಣ ಶೇಕಡ 3.6 ಆಗಿದೆ. ಇನ್ನೂ ಕಳವಳಕಾರಿ ಅಂಶವೆಂದರೆ ಪಟ್ಟಿಯಲ್ಲಿ ಭಾರತಕ್ಕಿಂತ ಕೆಳಗಿರುವ ದೇಶಗಳಲ್ಲಿ ಉಕ್ರೇನ್ ಹೊರತುಪಡಿಸಿದರೆ ಉಳಿದೆಲ್ಲ ದೇಶಗಳು ಕೋವಿಡ್-19 ಸೋಂಕು ಕಡಿಮೆ ದಾಖಲಾದ ದೇಶಗಳು. ಇವೆಲ್ಲವೂ ಏಷ್ಯಾ ಮತ್ತು ಆಫ್ರಿಕನ್ ದೇಶಗಳು. ಅತಿಹೆಚ್ಚು ಬಾಧಿತವಾಗಿರುವ ದೇಶಗಳ ಪೈಕಿ ಇರಾನ್ ಮತ್ತು ಉಕ್ರೇನ್ ಮಾತ್ರ ಭಾರತಕ್ಕಿಂತ ಕಡಿಮೆ ಪ್ರಮಾಣದ ಲಸಿಕೆ ನೀಡಿವೆ.

ಅಮೆರಿಕ (94.8), ಜರ್ಮನಿ (78.5), ಸ್ಪೇನ್ (75.7), ಇಟೆಲಿ (75.4), ಫ್ರಾನ್ಸ್ (70.6), ಚೀನಾ (70.2), ಟರ್ಕಿ (48.8) ನಂತರದ ಸ್ಥಾನಗಳಲ್ಲಿವೆ.

ಹೆಚ್ಚಿನ ಮಟ್ಟದ ಲಸಿಕೆ ಪಡೆದಿರುವ ದೇಶಗಳಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆ ಮತ್ತು ಮೃತರ ಸಂಖ್ಯೆ ಭಾರತಕ್ಕಿಂತ ಹೆಚ್ಚು. ಮೊದಲು ಕೋವಿಡ್-19 ಸೋಂಕು ಪತ್ತೆಯಾದ ಚೀನಾದಲ್ಲಿ ಲಸಿಕೆ ಪಡೆದವರ ಸಂಖ್ಯೆ 100 ಕೋಟಿಗಿಂತ ಅಧಿಕ. ಅಭಿವೃದ್ಧಿಶೀಲ ದೇಶಗಳಾದ ಚೀನಾ, ಟರ್ಕಿ, ಬ್ರೆಝಿಲ್, ಮೆಕ್ಸಿಕೊ ಮತ್ತು ಕೊಲಂಬಿಯಾದಂಥ ದೇಶಗಳೂ ಲಸಿಕೆ ನೀಡಿಕೆಯಲ್ಲಿ ಭಾರತಕ್ಕಿಂತ ಮೇಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News