ಕೊರೋನ: 50 ವರ್ಷಕ್ಕಿಂತ ಕೆಳಗಿನವರಲ್ಲಿ ಮರಣದ ಪ್ರಮಾಣ ಅಧಿಕ
ಹೊಸದಿಲ್ಲಿ, ಜೂ.28: ಕೋವಿಡ್ ಸೋಂಕಿತರಲ್ಲಿ 65 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಹೋಲಿಸಿದರೆ 50 ವರ್ಷಕ್ಕಿಂತ ಕಡಿಮೆ ವಯೋಮಾನದವರು ಮರಣಹೊಂದುವ ಪ್ರಮಾಣ ಅಧಿಕ ಎಂದು ದಿಲ್ಲಿಯ ಅಖಿಲಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್) ನಡೆಸಿದ ಅಧ್ಯಯನದ ವರದಿ ತಿಳಿಸಿದೆ.
2020ರ ಎಪ್ರಿಲ್ 4ರಿಂದ ಜುಲೈ 24ರವರೆಗಿನ ಅವಧಿಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟ ವಯಸ್ಕ ರೋಗಿಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಲಾಗಿದೆ. ಎಐಐಎಂಎಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ, ಎಐಐಎಂಎಸ್ ತುರ್ತುಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರಾಜೇಶ್ ಮಲ್ಹೋತ್ರಾ ಹಾಗೂ ಇತರರು ನಡೆಸಿದ ಅಧ್ಯಯನದ ವರದಿ ‘ಇಂಡಿಯನ್ ಜರ್ನಲ್ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್’ನಲ್ಲಿ ಪ್ರಕಟವಾಗಿದೆ. ಅಧ್ಯಯನದ ಅವಧಿಯಲ್ಲಿ 654 ವಯಸ್ಕ ರೋಗಿಗಳು ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದು ಇವರಲ್ಲಿ 247 ರೋಗಿಗಳು ಮೃತಪಟ್ಟಿದ್ದು ಮರಣದ ಪ್ರಮಾಣ 37.7% ದಾಖಲಾಗಿತ್ತು.
ಈ ವಯಸ್ಕ ರೋಗಿಗಳನ್ನು 18ರಿಂದ 50; 51ರಿಂದ 65; ಮತ್ತು 65ರಿಂದ ಅಧಿಕ ಎಂದು ವಿಂಗಡಿಸಲಾಗಿತ್ತು. ಮೃತರಲ್ಲಿ 18-50 ವರ್ಷದ ವಿಭಾಗದವರು 42.1%; 51-65 ವರ್ಷ ವಿಭಾಗದವರು 34.8% ಮತ್ತು 65ಕ್ಕಿಂತ ಹೆಚ್ಚಿನ ವರ್ಷ ವಿಭಾಗದವರು 23.1% ಎಂದು ಕಂಡುಬಂದಿದೆ. ಮೃತರಲ್ಲಿ ಹೆಚ್ಚಿನವರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿತ್ತು ಮತ್ತು ಉಸಿರಾಟದ ಸಮಸ್ಯೆ ಹಾಗೂ ಜ್ವರ, ಕೆಮ್ಮಿನ ರೋಗ ಸಾಮಾನ್ಯವಾಗಿತ್ತು. ವಿವಿಧ ಅಧ್ಯಯನದಲ್ಲಿ ಕೋವಿಡ್ ಸೋಂಕಿತರಲ್ಲಿ ಐಸಿಯುಗೆ ದಾಖಲಾಗಿ ಮರಣಹೊಂದಿದವರ ಪ್ರಮಾಣ 8%ದಿಂದ 66.7%ವಿತ್ತು. ಆದರೆ ಎಐಐಎಂಎಸ್ನಲ್ಲಿ ಇದು 36.1% ಆಗಿದೆ. ಅಮೆರಿಕ, ಸ್ಪೇನ್, ಇಟಲಿಯಲ್ಲೂ ಇದೇ ರೀತಿಯ ಮರಣಪ್ರಮಾಣ ದಾಖಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.