ಗುಜ್ಜರಕೆರೆ ಅತಿಕ್ರಮಿತ ಭೂಮಿ ಕೂಡಲೇ ತೆರವುಗೊಳಿಸಿ
ಮಾನ್ಯರೇ,
ಮಂಗಳೂರಿನ ಪುರಾತನ ಪ್ರಸಿದ್ಧ ಗುಜ್ಜರಕೆರೆಯ ಅಭಿವೃದ್ಧಿ ಕಾರ್ಯಗಳು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನೆರವೇರುತ್ತಿದೆ. ಐತಿಹಾಸಿಕ, ಧಾರ್ಮಿಕ ಮಹತ್ವ ಹೊಂದಿರುವ ಈ ಬೃಹತ್ ಕೆರೆಯು ಸುಮಾರು 3.45 ಎಕರೆ ವಿಸ್ತೀರ್ಣ ಹೊಂದಿದ್ದು, ಕೆಲಪಾಲು ಭೂಮಿ ಒತ್ತುವರಿಗೆ ಒಳಗಾಗಿದೆ. ಆದುದರಿಂದ ಒತ್ತುವರಿಗೆ ಒಳಗಾಗಿರುವ ಭೂಮಿಯನ್ನು ಕಾನೂನಾತ್ಮಕವಾಗಿ ತೆರವುಗೊಳಿಸಬೇಕು. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮುನ್ನವೇ ಈ ಪುರಾತನ ಕೆರೆಯ ಸರ್ವೇ ಕಾರ್ಯವನ್ನು ಕೈಗೊಳ್ಳಬೇಕಿತ್ತು. ಕೊನೆಗೂ ಇತ್ತೀಚೆಗೆ ಸರ್ವೇ ಕಾರ್ಯ ನಡೆದಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ದಶಕಗಳಿಂದ ನಡೆಯುತ್ತಿದ್ದ ವಿಳಂಬ ಭೂ ಒತ್ತುವರಿ ಕಾರ್ಯದಲ್ಲಿ ನಡೆಯದಂತೆ ಕ್ರಮ ಕೈಗೊಂಡು, ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳು ನೆರವೇರುವ ಸಂದರ್ಭವೇ ಕೆರೆಯ ಸಂಪೂರ್ಣ ಭೂಮಿಯನ್ನು ಕಾನೂನಾತ್ಮಕವಾಗಿ ವಶಪಡಿಸಿ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕಾಗಿ ವಿನಂತಿ. ಐತಿಹಾಸಿಕ ಮಹತ್ವವುಳ್ಳ ಈ ಪುರಾತನ ಜಲಮೂಲದ ಸುತ್ತಮುತ್ತಲೂ ವಾಕಿಂಗ್ ಟ್ರಾಕ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಪ್ರಸ್ತಾವ ಇರುವುದರಿಂದ ಕೆರೆಯ ಸುತ್ತ ಕೇವಲ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡದೆ ಮರ ಗಿಡಗಳನ್ನು ನೆಟ್ಟು ಸುತ್ತಲೂ ಹಸಿರೀಕರಣ ಮಾಡಬೇಕಾಗಿದೆ.