ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಮಾರುವೇಷದಲ್ಲಿ ಬಂಧಿಸಿದ ಗುಜರಾತ್ ಪೊಲೀಸರು
ಅಹಮದಾಬಾದ್: ನಾಟಕೀಯ ಸನ್ನಿವೇಶದಲ್ಲಿ ಅಹಮದಾಬಾದ್ ಪೊಲೀಸರು ಗುಜರಾತ್ ನ ಪಟಾನ್ ನ ಧಾಬಾದಲ್ಲಿ ಶಸ್ತ್ರಾಸ್ತ್ರ ಕಳ್ಳತನ ಹಾಗೂ ವಾಹನ ಕಳ್ಳತನ ಸಹಿತ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ 29ರ ವಯಸ್ಸಿನ ವ್ಯಕ್ತಿಯನ್ನು ಇತ್ತೀಚೆಗೆ ಬಂಧಿಸಿದ್ದಾರೆ.
ಸಾದಾ ಉಡುಪು ಧರಿಸಿದ್ದ ಡಿಟೆಕ್ಶನ್ ಆಫ್ ಕ್ರೈಮ್ ಬ್ರಾಂಚ್(ಡಿಸಿಬಿ)ನ ಹಲವು ಅಧಿಕಾರಿಗಳು ಬನಸ್ಕಾಂತ ನಿವಾಸಿ ಕಿಶೋರ್ ಪಾಂಚಾಲ್ ಅಲಿಯಾಸ್ ಕೆಕೆಯನ್ನು ಸೆರೆ ಹಿಡಿದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಆರೋಪಿಯಿಂದ ಸೆಮಿ ಆಟೊಮ್ಯಾಟಿಕ್ ಪಿಸ್ತೂಲ್, ಎರಡು ಮ್ಯಾಗಝಿನ್ ಗಳು ಹಾಗೂ 5 ಸುತ್ತು ಮದ್ದುಗುಂಡುಗಳನ್ನು ವಶಕ್ಕೆ ಪೆಡೆದಿದ್ದಾರೆ.
ಅಹಮದಾಬಾದ್ ನಲ್ಲಿ ಚಾಂದ್ ಖೇಡಾ ಹಾಗೂ ಸಬರಮತಿ ಪೊಲೀಸ್ ಠಾಣೆಗಳಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿ 2 ಪ್ರಕರಣಗಳು ದಾಖಲಾಗಿದ್ದವು. ಕಳ್ಳತನದಲ್ಲಿ ಕೆಕೆ ಭಾಗಿಯಾಗಿದ್ದಾನೆ ಎಂದು ನಮಗೆ ಗೊತ್ತಿತ್ತು. ತಾಂತ್ರಿಕತೆಯನ್ನು ಬಳಸಿಕೊಂಡು ಆರೋಪಿ ಇರುವ ಸ್ಥಳವನ್ನು ಪತ್ತೆ ಮಾಡಿದ್ದೇವೆ. ಜೂ.27ರಂದು ಸಂಜೆ ಪಟಾನ್ ಸಿಟಿಯ ಅಮರ್ ಪುರ ಗ್ರಾಮದ ಎಕ್ತಾ ರೆಸ್ಟೊರೆಂಟ್ ನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಹಮದಾಬಾದ್, ಬನಸ್ಕಾಂತ ಹಾಗೂ ರಾಜಸ್ಥಾನದ 10 ಪೊಲೀಸ್ ಠಾಣೆಗಳಲ್ಲಿ ದರೋಡೆ, ವಾಹನ ಕಳ್ಳತನ, ಅತ್ಯಾಚಾರ ಸಹಿತ ಹಲವು ಪ್ರಕರಣಗಳಿಗೆ ಈತ ಬೇಕಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.