ಅನರ್ಹತೆ ಅರ್ಜಿಗಳ ಕಾಲೋಚಿತ ಇತ್ಯರ್ಥಕ್ಕಾಗಿ ಸಂಸತ್ ಮಾತ್ರ ಕಾನೂನು ರೂಪಿಸಬಲ್ಲದು: ಸುಪ್ರೀಂ
ಹೊಸದಿಲ್ಲಿ, ಜು.1: ಸಂವಿಧಾನದ 10ನೇ ಅನುಚ್ಛೇದದಡಿ ಸ್ಪೀಕರ್ ಅಥವಾ ಸದನದ ಅಧ್ಯಕ್ಷರಿಂದ ಅನರ್ಹತೆ ಅರ್ಜಿಗಳ ಕಾಲೋಚಿತ ಇತ್ಯರ್ಥಕ್ಕಾಗಿ ಕಾನೂನನ್ನು ರಚಿಸುವುದು ಶಾಸಕಾಂಗಕ್ಕೆ ಬಿಟ್ಟ ವಿಷಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿದೆ.
ನಾವು ಹೇಗೆ ಕಾನೂನನ್ನು ರೂಪಿಸಲಾಗುತ್ತದೆ? ಅದು ಸಂಸತ್ತಿನ ವಿಷಯವಾಗಿದೆ ಎಂದು ಮು.ನ್ಯಾ.ಎನ್.ವಿ.ರಮಣ ನೇತೃತ್ವದ ಪೀಠವು ಪ್ರಶ್ನಿಸಿತು. ಸ್ಪೀಕರ್ಗಳಿಂದ ಅನರ್ಹತೆ ಅರ್ಜಿಗಳ ಕಾಲೋಚಿತ ಇತ್ಯರ್ಥಕ್ಕಾಗಿ ಮಾರ್ಗಸೂಚಿಗಳನ್ನು ರಚಿಸಲು ಕೇಂದ್ರಕ್ಕೆ ನಿರ್ದೇಶ ನೀಡುವಂತೆ ಪ.ಬಂಗಾಳ ಕಾಂಗ್ರೆಸ್ ಸಮಿತಿಯ ಸದಸ್ಯ ರಂಜಿತ್ ಮುಖರ್ಜಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
10ನೇ ಅನುಚ್ಛೇದದಡಿ ಅನರ್ಹತೆ ಅರ್ಜಿಗಳ ಬಗ್ಗೆ ಸ್ಪೀಕರ್ಗಳು ಸಕಾಲಿಕ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ,ಹೀಗಾಗಿ ನಿಗದಿತ ಗಡುವನ್ನು ನಾವು ಬಯಸುತ್ತೇವೆ ಎಂದು ಅರ್ಜಿದಾರರ ಪರ ವಕೀಲ ಅಭಿಷೇಕ ಜೇಬರಾಜ್ ಹೇಳಿದರು.
ಕರ್ನಾಟಕ ಶಾಸಕರ ಪ್ರಕರಣದಲ್ಲಿ ನಾನೀಗಾಗಲೇ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಈ ವಿಷಯ ಆಗಲೂ ಪ್ರಸ್ತಾಪಗೊಂಡಿತ್ತು ಮತ್ತು ನಿರ್ಧಾರವನ್ನು ನಾವು ಸಂಸತ್ತಿಗೆ ಬಿಟ್ಟಿದ್ದೆವು ಎಂದು ಮು.ನ್ಯಾ.ರಮಣ ಹೇಳಿದರು.
ನೀವು ಆ ತೀರ್ಪನ್ನು ಓದಿದ್ದೀರಾ ಎಂಬ ನ್ಯಾಯಾಲಯದ ಪ್ರಶ್ನೆಗೆ ಜೇಬರಾಜ್ ನಕಾರಾತ್ಮಕವಾಗಿ ಉತ್ತರಿಸಿದರು.