ಪಶ್ಚಿಮ ಬಂಗಾಳ ಅಧಿವೇಶನದಲ್ಲಿ ಬಿಜೆಪಿ ಶಾಸಕರ ರಾದ್ಧಾಂತ: ಅರ್ಧದಲ್ಲಿಯೇ ಭಾಷಣ ನಿಲ್ಲಿಸಿದ ರಾಜ್ಯಪಾಲರು

Update: 2021-07-02 13:11 GMT

ಕೊಲ್ಕತ್ತಾ: ವಿಧಾನಸಭಾ ಚುನಾವಣೆಗಳ ನಂತರ ಇಂದು ನಡೆದ ಪ್ರಥಮ ದಿನದ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಶಾಸಕರು ರಾಜ್ಯದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ ಕಾರಣ ರಾಜ್ಯಪಾಲ ಜಗದೀಪ್ ಧನ್ಕರ್ ತಮ್ಮ ಭಾಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿ ಸ್ಥಳದಿಂದ ನಿರ್ಗಮಿಸಿದರು.

"ರಾಜ್ಯದ ಕಾನೂನು ಸುವ್ಯವಸ್ಥೆ ಚುನಾವಣಾ ಆಯೋಗದ  ಜವಾಬ್ದಾರಿಯಾಗಿದ್ದ ಸಂದರ್ಭದಲ್ಲಿ ಎಲ್ಲಾ ಹಿಂಸಾತ್ಮಕ ಘಟನೆಗಳು ನಡೆದಿದ್ದವು. ಹೊಸ ಸರಕಾರ ಚುನಾಯಿತಗೊಂಡ ಮೇಲೆ  ಪರಿಸ್ಥಿತಿ ಸಹಜತೆಗೆ ಮರಳಿದೆ" ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದರು.

ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಶಾಸಕರು, ಈ ಭಾಷಣವನ್ನು ರಾಜ್ಯಪಾಲರು ಸಿದ್ಧಪಡಿಸಿಲ್ಲ, ರಾಜ್ಯ ಸರಕಾರ ಸಿದ್ಧಪಡಿಸಿದೆ ಹಾಗೂ ಅದರಲ್ಲಿ ಚುನಾವಣೋತ್ತರ ಹಿಂಸಾಚಾರ ಕುರಿತು ಉಲ್ಲೇಖವಿಲ್ಲ ಎಂದು ಆರೋಪಿಸಿದ್ದಾರೆ.

ವಿಪಕ್ಷ ನಾಯಕ ಸುವೇಂದು ಅಧಿಕಾರಿ ಪ್ರತಿಕ್ರಿಯಿಸಿ, "ನಾವು 77 ಸ್ಥಾನಗಳನ್ನು ಗೆದ್ದಿದ್ದೇವೆ.  ರಾಜ್ಯಪಾಲರ ಭಾಷಣವನ್ನು ರಾಜ್ಯ ಸರಕಾರ ಬರೆದಿದೆ ಹಾಗೂ ಅದರಲ್ಲಿ ಚುನಾವಣೋತ್ತರ ಹಿಂಸಾಚಾರದ ಉಲ್ಲೇಖವಿಲ್ಲ. ನಾವು ರಾಜ್ಯಪಾಲರನ್ನು ಗೌರವಿಸುತ್ತೇವೆ. ಹಿಂಸಾಚಾರದ ಬಗ್ಗೆ ಅವರು  ಆಕ್ಷೇಪಿಸಿದ್ದರು. ಅವರ ನಿಲುವನ್ನು ನಾವು ಗೌರವಿಸುತ್ತೇವೆ. ಆದರೆ ಅವರ ಭಾಷಣವನ್ನು ಮಮತಾ ಅವರ ಸಚಿವ ಸಂಪುಟ ಬರೆದಿದೆ. ಈ ಭಾಷಣದಲ್ಲಿ ರಾಜ್ಯಪಾಲರಿಗೆ ಏನೂ ಇಲ್ಲ. ನಾವು ಹಿಂಸೆಯಲ್ಲಿ ಮೃತಪಟ್ಟ ಕಾರ್ಯಕರ್ತರ ಚಿತ್ರಗಳನ್ನು ಹಿಡಿದು ಪ್ರತಿಭಟಿಸಿದೆವು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News