×
Ad

ಸಹಕಾರಿ ಸಚಿವಾಲಯದ ರಚನೆ ಫೆಡರಲ್ ಹಕ್ಕಗಳ ಉಲ್ಲಂಘನೆ ಪ್ರಯತ್ನ: ಕೇಂದ್ರ ಸರಕಾರಕ್ಕೆ ಸೀತಾರಾಮ ಯೆಚೂರಿ ತರಾಟೆ

Update: 2021-07-08 22:04 IST
Photo : twitter.com/SitaramYechury 

ಹೊಸದಿಲ್ಲಿ, ಜು. 8: ಸಹಕಾರಿ ಸಚಿವಾಲಯದ ರಚನೆ ರಾಜ್ಯ ಸರಕಾರಗಳ ಫೆಡರಲ್ ಹಕ್ಕುಗಳ ಉಲ್ಲಂಘಿಸುವ ಪ್ರಯತ್ನವಾಗಿದೆ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಟೀಕಿಸಿದ್ದಾರೆ. ‌

ಇಂಡಿಯಾ ಟುಡೆ ಟಿವಿಯೊಂದಿಗೆ ಮಾತನಾಡಿದ ಅವರು, ‘‘ಈ ನಿರ್ಧಾರದ ಕುರಿತ ಮೊದಲ ಆಕ್ಷೇಪವೆಂದರೆ, ಸಂವಿಧಾನದ ಮೂಲ ರಚನೆಯಾದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ನಡುವಿನ ಸಂಬಂಧವನ್ನು ಇದು ಛಿದ್ರಗೊಳಿಸುತ್ತದೆ’’ ಎಂದಿದ್ದಾರೆ. ಸಹಕಾರಿ ಸೊಸೈಟಿಗಳು ರಾಜ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಸಂವಿಧಾನ 7ನೇ ಪರಿಚ್ಛೇದ ಹೇಳುತ್ತದೆ. ಆದುದರಿಂದ ಅವರ ಹಕ್ಕುಗಳನ್ನು ಅತಿಕ್ರಮಿಸುವ ಹಿಂದಿರುವ ಕೇಂದ್ರ ಸರಕಾರದ ಉದ್ದೇಶ ಏನು? ಕೇಂದ್ರ ಸರಕಾರ ಹೀಗೆ ಯಾಕೆ ಮಾಡುತ್ತದೆ? ಎಂದು ಅವರು ಪ್ರಶ್ನಿಸಿದ್ದಾರೆ. 

ಅವರು (ಮೆಹುಲ್ ಚೋಕ್ಸಿ, ನೀರವ್ ಮೋದಿ, ವಿಜಯ್ ಮಲ್ಯ) ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಲೂಟಿ ಮಾಡಿದ್ದಾರೆ. ದೇಶದಿಂದ ಪರಾರಿಯಾದವರಿಗೆ ಮೋದಿ ಸರಕಾರ ದೊಡ್ಡ ಮೊತ್ತದ ಸಾಲ ನೀಡಿತ್ತು. ಅದೆಲ್ಲವೂ ಜನರ ಹಣ. ಇನ್ನು ಹಣ ಲೂಟಿಗೈಯಲು ಅವಕಾಶ ಇರುವುದು ಸಹಕಾರಿ ಬ್ಯಾಂಕ್ಗಳು. ಇದೊಂದೇ ಅವರಿಗೆ ಇರುವ ಮಾರ್ಗ’’ ಎಂದಿದ್ದಾರೆ. 

ಸಂಸತ್ತಿನಲ್ಲಿ ಈ ತಿದ್ದುಪಡಿಯನ್ನು ಮಂಡಿಸಿದರೆ ನಾವು ವಿರೋಧಿಸುತ್ತೇವೆ. ಇದನ್ನು ವಿರೋಧಿಸುವಂತೆ ನಾವು ಎಲ್ಲ ಪಕ್ಷಗಳಿಗೆ ಕರೆ ನೀಡುತ್ತೇವೆ. ಇದು ಸಹಕಾರಿ ಫೆಡರಲ್ ವಾದಕ್ಕೆ ವಿರುದ್ಧವಾದುದು. ಅಲ್ಲದೆ ರಾಜ್ಯಗಳ ಹಿತಾಸಕ್ತಿಗೆ ಕೂಡ ವಿರುದ್ಧವಾದುದು ಎಂದು ಯೆಚೂರಿ ಹೇಳಿದರು. ರಾಜ್ಯಗಳು ಹಾಗೂ ಸಹಕಾರಿ ಪೆಡರಲಿಸಂನ ಮೇಲೆ ದಾಳಿ ನಡೆಸಲು ನಾವು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು. 

ನೂತನ ಸಚಿವ ಸಂಪುಟದ ಬಗ್ಗೆ ಅನಿಸಿಕೆ ಹಂಚಿಕೊಂಡ ಅವರು, ಸರಕಾರವನ್ನು ಹೇಗೆ ನಡೆಸಬೇಕು ಎಂದು ಅವರಿಗೆ ಗೊತ್ತಿದೆ. ಪ್ರಧಾನಿ ಅವರು ತಮ್ಮ ಸಚಿವ ಸಂಪುಟದಲ್ಲಿ ಹೆಚ್ಚಿನ ಮಹಿಳೆಯರು ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ನೀಡಿದ ಮಹಿಳಾ ಮೀಸಲಾತಿ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ ಎಂದು ಯೆಚೂರಿ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News