ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್: ಫೈನಲ್ ತಲುಪಿದ ಇಟಲಿಯ ಮೊದಲ ಆಟಗಾರ ಬೆರೆಟ್ಟಿನಿ
Update: 2021-07-09 21:39 IST
ಲಂಡನ್: ಹ್ಯೂಬರ್ಟ್ ಹರ್ಕಝ್ ವಿರುದ್ಧ 4 ಸೆಟ್ ಗಳ ಅಂತರದಿಂದ ಗೆಲುವು ಸಾಧಿಸಿರುವ ಮ್ಯಾಟಿಯೊ ಬೆರೆಟ್ಟಿನಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿದ ಇಟಲಿಯ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸೆಮಿ ಫೈನಲ್ ನಲ್ಲಿ ಬೆರೆಟ್ಟಿನಿ ಪೊಲೆಂಡ್ ನ ಎದುರಾಳಿಯ ವಿರುದ್ಧ 6-3, 6-0, 6-7(3/7), 6-4 ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು.
ವಿಶ್ವದ ನಂ.9ನೇ ಆಟಗಾರ ಬೆರೆಟ್ಟಿನಿ ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮತ್ತೊಂದು ಸೆಮಿ ಫೈನಲ್ ನಲ್ಲಿ ಜಯ ಸಾಧಿಸಲಿರುವ ನೊವಾಕ್ ಜೊಕೊವಿಕ್ ಅಥವಾ ಡೆನಿಸ್ ಶಪೊವಾಲೊವ್ ಅವರನ್ನು ಎದುರಿಸಲಿದ್ದಾರೆ. ಬೆರೆಟ್ಟಿನಿ ಪುರುಷರ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ ಮೊದಲ ಇಟಲಿ ಆಟಗಾರನಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ಸಜ್ಜಾಗಿದ್ದಾರೆ.