ಟೋಕಿಯೊ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಇಬ್ಬರು ಅಥ್ಲೀಟ್ ಗಳಿಗೆ ಕೊರೋನ ಪಾಸಿಟಿವ್
ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟ ಉದ್ಘಾಟನೆಗೊಳ್ಳಲು ಕೆಲವೇ ದಿನಗಳು ಬಾಕಿ ಇರುವಾಗ ಕ್ರೀಡಾಪಟುಗಳು ವಾಸವಾಗಿರುವ ಕ್ರೀಡಾಗ್ರಾಮದಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಕೋವಿಡ್ -19 ಸೋಂಕಿನ ಇನ್ನೆರಡು ಹೊಸ ಪ್ರಕರಣಗಳು ರವಿವಾರ ವರದಿಯಾಗಿದೆ. ತಂಡದ ಸಹೋದ್ಯೋಗಿಗೆ ಸೋಂಕು ತಗಲಿದ ಬಳಿಕ ಇಬ್ಬರು ಅಥ್ಲೀಟ್ ಗಳಿಗೆ ಸೋಂಕು ತಗಲಿದೆ ಎಂದು ಒಲಿಂಪಿಕ್ಸ್ ಸಂಘಟಕರು ತಿಳಿಸಿದ್ದಾರೆ.
ಕ್ರೀಡಾಗ್ರಾಮದಲ್ಲಿ ನೆಲೆಸಿರುವ ಕ್ರೀಡಾಪಟುವಿಗೆ ಮೊದಲ ಕೊರೋನ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇನ್ನೊಬ್ಬ ಕ್ರೀಡಾಪಟು ಜಪಾನಿನ ರಾಜಧಾನಿಗೆ ಬಂದ ನಂತರ ಕೊರೋನ ಪಾಸಿಟಿವ್ ಆಗಿದೆ. ಆದರೆ ಆ ಕ್ರೀಡಾಪಟು ಕ್ರೀಡಾಗ್ರಾಮದ ನಿವಾಸಿಯಲ್ಲ.
ಮೂರು ಪ್ರಕರಣಗಳು ಒಂದೇ ದೇಶದ ಹಾಗೂ ಒಂದೇ ಕ್ರೀಡೆಯಲ್ಲಿ ಸ್ಪರ್ಧಿಸುವ ಕ್ರೀಡಾಳುವಿನಲ್ಲಿ ವರದಿಯಾಗಿದೆ. ಮೂವರನ್ನು ಕೊಠಡಿಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರಿಗೆ ಊಟೋಪಚಾರ ಮಾಡಲಾಗುತ್ತಿದೆ. ತಂಡದ ಉಳಿದ ಕ್ರೀಡಾಳುಗಳನ್ನು ಪರೀಕ್ಷಿಸಲಾಗುವುದು ಎಂದು ಟೋಕಿಯೊ-2020ರ ವಕ್ತಾರ ಮಾಸಾ ಟಕಾಯಾ ಹೇಳಿದ್ದಾರೆ.
ಕ್ರೀಡಾಕೂಟದ ವೇಳೆ ಸಾವಿರಾರು ಸ್ಪರ್ಧಿಗಳು ನೆಲೆಸಲಿರುವ ಕ್ರೀಡಾ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರಿಗೆ ಕೊರೋನ ಪಾಸಿಟಿವ್ ಒಳಗಾದ ಒಂದು ದಿನದ ನಂತರ ಈ ಪ್ರಕರಣಗಳು ಬಹಿರಂಗಗೊಂಡಿವೆ.
ಒಲಿಂಪಿಕ್ಸ್ ಸಂಘಟಕರು ಶನಿವಾರ ಕೋವಿಡ್ -19 ರ ಮೊದಲ ಪ್ರಕರಣವನ್ನು ವರದಿ ಮಾಡಿದ್ದಾರೆ. ಜೊತೆಗೆ ಮುಂದಿನ ವಾರದಿಂದ ಆರಂಭವಾಗುವ ಕ್ರೀಡಾಕೂಟಕ್ಕೆ ಸಂಬಂಧಿಸಿದ 14 ಹೊಸ ಪ್ರಕರಣಗಳು "ಸುರಕ್ಷಿತ ‘’ ಸ್ಪರ್ಧೆಯ ಭರವಸೆಗಳ ಬಗ್ಗೆ ಹೊಸ ಅನುಮಾನಗಳನ್ನು ಹುಟ್ಟುಹಾಕಿದೆ.