ಒಲಿಂಪಿಕ್ಸ್ ಹಾಕಿ: ಸ್ಪೇನ್ ವಿರುದ್ಧ ಭಾರತಕ್ಕೆ 3-0 ಅಂತರದ ಜಯ

Update: 2021-07-27 03:44 GMT

ಟೋಕಿಯೊ, ಜು.27: ಒಲಿಂಪಿಕ್ಸ್‌ನ ಹಾಕಿ ಸ್ಪರ್ಧೆಯ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಮಂಗಳವಾರ ಸ್ಪೇನ್ ತಂಡವನ್ನು 3-0 ಗೋಲುಗಳಿಂದ ಪರಾಭವಗೊಳಿಸಿದೆ.

ಈ ಜಯದೊಂದಿಗೆ ಭಾರತ ಎ ಗುಂಪಿನಲ್ಲಿ 2ನೇ ಸ್ಥಾನಕ್ಕೇರಿದೆ. ಮೂರು ಪಂದ್ಯಗಳಲ್ಲಿ ಎರಡು ಜಯ ಹಾಗೂ ಒಂದು ಸೋಲಿನೊಂದಿಗೆ ಭಾರತ ಒಟ್ಟು ಆರು ಅಂಕಗಳನ್ನು ಸಂಪಾದಿಸಿದೆ. ಭಾರತದ ಗೋಲು ವ್ಯತ್ಯಾಸ -2 ಆಗಿದೆ. ಗುಂಪಿನ ಅಗ್ರ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಮುನ್ನಡೆಯಲಿವೆ. ಭಾರತದ ಪರವಾಗಿ ರೂಪೀಂದ್ರಪಾಲ್ ಸಿಂಗ್ ಎರಡು ಗೋಲು ಬಾರಿಸಿದರು.

ನಿರಾಶಾದಾಯಕ ಪ್ರದರ್ಶನ: ಸೌರಭ್ ಚೌಧರಿ ಮತ್ತು ಮನು ಭಾಕೆರ್ ಅವರನ್ನೊಳಗೊಂಡ ಭಾರತೀಯ ಶೂಟರ್‌ಗಳ ತಂಡ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯ 2ನೇ ಹಂತದ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನಕ್ಕೆ ಕುಸಿದು ಪದಕ ಸುತ್ತಿಗೆ ತೇರ್ಗಡೆಯಾಗಲು ವಿಫಲವಾಯಿತು.

2ನೇ ಹಂತದ ಅರ್ಹತಾ ಸುತ್ತಿನಲ್ಲಿ ಚೌಧರಿ ಹಾಗೂ ಭಾಕೆರ್ ಒಟ್ಟು 380 ಅಂಕಗಳನ್ನು ಕಲೆ ಹಾಕಲು ಮಾತ್ರ ಸಾಧ್ಯವಾಗಿ ಒಲಿಂಪಿಕ್ಸ್ ಸ್ಪರ್ಧೆಯಿಂದ ನಿರ್ಗಮಿಸಬೇಕಾಯಿತು. 2ನೇ ಹಂತದ ಅರ್ಹತಾ ಸುತ್ತಿನ ಅಗ್ರ ಎರಡು ತಂಡಗಳು ಚಿನ್ನದ ಪದಕಕ್ಕೆ ಸೆಣೆಸಲಿವೆ. ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳು ಕಂಚಿನ ಪದಕಕ್ಕೆ ಸೆಣೆಸುತ್ತವೆ. ಮೊದಲ ಸರಣಿಯಲ್ಲಿ ಸೌರಭ್ 96 ಅಂಕ ಕಲೆಹಾಕಿದರೆ ಮನು 92 ಅಂಕಕ್ಕೆ ತೃಪ್ತಿಪಟ್ಟರು. 2ನೇ ಸರಣಿಯಲ್ಲಿ ಕ್ರಮವಾಗಿ 98 ಹಾಗೂ 94 ಅಂಕ ಕಲೆಹಾಕಿದರೂ ಪದಕ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News