ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಸೈಕಲ್ ಏರಿ ಸಂಸತ್ ನತ್ತ ತೆರಳಿದ ರಾಹುಲ್ ಗಾಂಧಿ

Update: 2021-08-03 12:27 GMT

ಹೊಸದಿಲ್ಲಿ:  ಸಂಸತ್ತಿನ ಮುಂಗಾರು ಅಧಿವೇಶನದ ಉಳಿದ ಭಾಗಗಳಲ್ಲಿ ಪೆಗಾಸಸ್ ಸ್ಪೈವೇರ್ ಮೂಲಕ ಕಣ್ಗಾವಲು ಸೇರಿದಂತೆ ವಿವಿಧ ವಿಷಯಗಳಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ಹಲವು ವಿರೋಧ ಪಕ್ಷಗಳ ನಾಯಕರೊಂದಿಗೆ ಚರ್ಚಿಸಲು ಮಂಗಳವಾರ ಉಪಹಾರ ಸಭೆಯನ್ನು ಆಯೋಜಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಯ ನಂತರ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಸಂಸತ್ತಿನತ್ತ ಸೈಕಲ್ ಜಾಥಾ ನಡೆಸಿದರು.

ಭಿತ್ತಿಪತ್ರದೊಂದಿಗೆ ಸೈಕಲ್ ಜಾಥಾ ನಡೆಸಿದ ರಾಹುಲ್ ಗೆ ಇತರ ಪಕ್ಷಗಳ ನಾಯಕರು ಸಾಥ್ ನೀಡಿದರು. ಸಂಸತ್ ಗೆ ಸೈಕಲ್ ಜಾಥಾದಲ್ಲಿ ಬಂದಿದ್ದ ವಿರೋಧ ಪಕ್ಷದ ನಾಯಕರು ಸೈಕಲ್ ಗಳನ್ನು ಸಂಸತ್ ನ ಹೊರಗೆ ನಿಲ್ಲಿಸಿದ್ದರು.

ವಿಶೇಷವಾಗಿ ಪೆಟ್ರೋಲ್ ದೇಶದ ವಿವಿಧ ಭಾಗಗಳಲ್ಲಿ ಪ್ರತಿ ಲೀಟರ್‌ಗೆ 100 ರೂ. ದಾಟಿದೆ.

ಕಾಂಗ್ರೆಸ್‌ನ ಸುಮಾರು 100 ಸಂಸದರನ್ನು ಹೊರತುಪಡಿಸಿ,  ಶಿವಸೇನೆ, ಸಿಪಿಎಂ, ಸಿಪಿಐ, ಆರ್‌ಜೆಡಿ ಹಾಗೂ ಸಮಾಜವಾದಿ ಪಕ್ಷ ಸಭೆಯಲ್ಲಿ ಭಾಗವಹಿಸಿದ್ದವು. ಐಯುಎಂಎಲ್, ಆರ್ ಎಸ್ ಪಿ, ಕೆಸಿಎಂ ಹಾಗೂ ಆರ್ ಎಸ್ ಪಿ  ಜೊತೆಗೆ ಜೆಎಂಎಂ, ಜೆಕೆಎನ್ ಸಿ ಯ ನಾಯಕರು ಕೂಡ ಸಭೆಯಲ್ಲಿ ಹಾಜರಿದ್ದರು.

ರಾಹುಲ್ ಗಾಂಧಿಯವರ ಈ ಹಿಂದಿನ ಪ್ರತಿಪಕ್ಷ ನಾಯಕರ ಸಭೆಯಿಂದ ದೂರ ಉಳಿದಿದ್ದ ತೃಣಮೂಲ ಕಾಂಗ್ರೆಸ್ ಇಂದಿನ ಉಪಹಾರ ಕೂಟದಲ್ಲಿ ಹಾಜರಿತ್ತು. ಆಮ್ ಆದ್ಮಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ( ಬಿಎಸ್ ಪಿ) ಸಭೆಯಿಂದ ದೂರ ಉಳಿದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News