ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಗೆ ಒಲಿಂಪಿಕ್ಸ್ ತಂಡವನ್ನು ಆಹ್ವಾನಿಸಲು ಪ್ರಧಾನಿ ಚಿಂತನೆ

Update: 2021-08-03 16:53 GMT

ಹೊಸದಿಲ್ಲಿ,ಆ.3: ಪ್ರಧಾನಿ ನರೇಂದ್ರ ಮೋದಿಯವರು ದಿಲ್ಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಭಾರತೀಯ ಒಲಿಂಪಿಕ್ಸ್ ತಂಡವನ್ನು ಆಹ್ವಾನಿಸಲಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷವೂ ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ ಸರಳವಾಗಿ ನಡೆಯುವ ನಿರೀಕ್ಷೆಯಿದೆ.

ಪ್ರಧಾನಿಯವರು ಕ್ರೀಡಾಪಟುಗಳನ್ನು ವೈಯಕ್ತಿಕವಾಗಿ ಭೇಟಿಯಾಗಿ ಅವರೊಡನೆ ಸಂವಾದವನ್ನೂ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಇಲ್ಲಿ ತಿಳಿಸಿದರು.

ಈ ವರ್ಷ ಅತ್ಯಧಿಕ ಸಂಖ್ಯೆಯಲ್ಲಿ ಭಾರತೀಯ ಕ್ರೀಡಾಳುಗಳು ಒಲಿಂಪಿಕ್ಸ್ ನ ಅರ್ಹತಾ ಸುತ್ತುಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದ ಮೋದಿ,‘ಒಂದು ನೂರು ವರ್ಷಗಳಲ್ಲಿಯ ಅತ್ಯಂತ ಬೃಹತ್ ವಿಪತ್ತನ್ನು ಎದುರಿಸಿ ಅವರು ಈ ಸಾಧನೆಯನ್ನು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಾವು ಹಲವಾರು ಕ್ರೀಡೆಗಳಲ್ಲಿ ಭಾಗಿಯಾಗುವ ಅರ್ಹತೆಯನ್ನು ಗಳಿಸಿದ್ದೇವೆ.ಇಷ್ಟು ಮಾತ್ರವಲ್ಲ,ನಮ್ಮ ಕ್ರೀಡಾಳುಗಳು ಕಠಿಣ ಸ್ಪರ್ಧೆಯನ್ನೂ ನೀಡಿದ್ದಾರೆ ’ ಎಂದು ಹೇಳಿದರು. ಟೋಕಿಯೊ ಒಲಿಂಪಿಕ್ಸ್ನಲ್ಲಿ 120ಕ್ಕೂ ಅಧಿಕ ಅಥ್ಲೀಟ್ಗಳನ್ನು ಒಳಗೊಂಡಿರುವ ಈವರೆಗಿನ ಅತ್ಯಂತ ಬೃಹತ್ ತಂಡವು ಭಾರತವನ್ನು ಪ್ರತಿನಿಧಿಸಿದ್ದು,ಈ ಪೈಕಿ 56 ಮಹಿಳೆಯರು ಇರುವುದೂ ಒಂದು ದಾಖಲೆಯಾಗಿದೆ.

ಸೋಮವಾರ ಭಾರತೀಯ ಮಹಿಳಾ ಹಾಕಿ ತಂಡವು ಆಸ್ಟ್ರೇಲಿಯಾವನ್ನು 1-0 ಗೋಲಿನಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.

ರವಿವಾರ ಅಗ್ರ ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು ಅವರು ಮಹಿಳೆಯರ ಸಿಂಗಲ್ಸ್ ನಲ್ಲಿ ವೀನಾದ ಹೆ ಬಿಂಗ್ ಜಿಯಾವೊ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದುಗೊಂಡಿದ್ದರು. ಇದರೊಂದಿಗೆ ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಎರಡು ವೈಯಕ್ತಿಕ ಪದಗಳನ್ನು ಗೆದ್ದುಕೊಂಡ ಭಾರತದ ಮೊದಲ ಮಹಿಳಾ ಕ್ರೀಡಾಳುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ವಾರ ಮೀರಾಬಾಯಿ ಚಾನು ಅವರು ವೇಟ್ಲಿಫ್ಟಿಂಗ್ನ 49 ಕೆ.ಜಿ.ವರ್ಗದಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಭಾರ ಎತ್ತುಗೆಯಲ್ಲಿ ಪದಕಕ್ಕಾಗಿ ಭಾರತದ 21 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News