ಲಸಿಕೆ ಪ್ರಮಾಣ ಪತ್ರದಲ್ಲಿರುವ ಪ್ರಧಾನಿ ಮೋದಿಯ ಚಿತ್ರವು ಜನರಲ್ಲಿ ಕೋವಿಡ್‌ ಜಾಗೃತಿ ಮೂಡಿಸುತ್ತದೆ: ಕೇಂದ್ರ ಸಚಿವ

Update: 2021-08-12 09:24 GMT

ಹೊಸದಿಲ್ಲಿ: ಕೋವಿಡ್ ಲಸಿಕೆ ಪ್ರಮಾಣಪತ್ರಗಳಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫೋಟೋ ಲಸಿಕೆಯ ನಂತರವೂ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದು ಕೇಂದ್ರ‌ ಸಚಿವರು ಮಂಗಳವಾರ ಹೇಳಿದ್ದಾಗಿ scroll.in ವರದಿ ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಅವರು ಕಾಂಗ್ರೆಸ್ ರಾಜ್ಯಸಭಾ ಸಂಸದ ಕುಮಾರ್ ಕೇತ್ಕರ್ ಅವರ ಪ್ರಶ್ನೆಗೆ ಉತ್ತರಿಸಿದರು.

"ಈಗಿನ ಕೋವಿಡ್ ಸಾಂಕ್ರಾಮಿಕದ ಸನ್ನಿವೇಶವನ್ನು ಗಮನಿಸಿದರೆ, ಅದರ ವಿಕಸಿತ ಸ್ವಭಾವ ಅರಿತುಕೊಳ್ಳುವುದು ಮತ್ತು ಕೋವಿಡ್-ಸೂಕ್ತವಾದ ನಡವಳಿಕೆಗಳನ್ನು ಅನುಸರಿಸುವುದು ರೋಗದ ಹರಡುವಿಕೆಯನ್ನು ತಡೆಗಟ್ಟುವ ಅತ್ಯಂತ ನಿರ್ಣಾಯಕ ಕ್ರಮಗಳಲ್ಲಿ ಒಂದಾಗಿದೆ" ಎಂದು ಪವಾರ್ ತನ್ನ ಉತ್ತರದಲ್ಲಿ ಹೇಳಿದರು.

ಮೋದಿಯವರ ಫೋಟೋ ಮತ್ತು ಸಂದೇಶವು ಈ ಅಂಶದ ಬಗ್ಗೆ ಜಾಗೃತಿಯನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಲಸಿಕೆ ಪ್ರಮಾಣಪತ್ರದ ಸ್ವರೂಪವು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗೆ ಅನುಸಾರವಾಗಿದೆ ಎಂದು ಅವರು ಹೇಳಿದರು.

ಕೋವಿನ್ ಪ್ಲಾಟ್‌ಫಾರ್ಮ್ ಮೂಲಕ ನೀಡಲ್ಪಡುವ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿಯವರ ಫೋಟೋವನ್ನು ಅಳವಡಿಸುವುದರ ಕುರಿತು ವಿರೋಧ ಪಕ್ಷಗಳು ಹಿಂದಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿವೆ.

ಈ ವರ್ಷದ ಆರಂಭದಲ್ಲಿ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಈ ಕುರಿತು ದೂರು ಸಲ್ಲಿಸಿತ್ತು.

ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರೇನ್ ಅವರು, ಪ್ರಧಾನಿ ಮೋದಿ ತಮ್ಮ ಛಾಯಾಚಿತ್ರವನ್ನು ಬಳಸುವ ಮೂಲಕ, ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಮತ್ತು ಆರೋಗ್ಯ ಕಾರ್ಯಕರ್ತರ ಕ್ರೆಡಿಟ್‌ ಅನ್ನು ತಾವು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಬಳಿಕ ಚುನಾವಣಾ ಆಯೋಗವು ಮತದಾನಕ್ಕೆ ಒಳಪಟ್ಟ ರಾಜ್ಯಗಳಲ್ಲಿನ ಲಸಿಕೆ ಪ್ರಮಾಣಪತ್ರಗಳಿಂದ ಪ್ರಧಾನಿಯ ಚಿತ್ರಗಳನ್ನು ತೆಗೆಯುವಂತೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News