ಮನ್‍ರೇಗಾ ಕಾಯ್ದೆಯಡಿಯಲ್ಲಿ ನಾಲ್ಕು ವರ್ಷಗಳಲ್ಲಿ ರೂ. 935 ಕೋಟಿ ದುರುಪಯೋಗ: ವರದಿ

Update: 2021-08-21 12:18 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳಲ್ಲಿ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯನ್ವಯ ಜಾರಿಯಾಗಿರುವ ವಿವಿಧ ಯೋಜನೆಗಳಲ್ಲಿ ರೂ 935 ಕೋಟಿ ದುರುಪಯೋಗವಾಗಿದೆ ಎಂದು  ಗ್ರಾಮೀಣಾಭಿವೃದ್ಧಿ ಇಲಾಖೆಗಳಡಿಯಲ್ಲಿರುವ  ಸೋಶಿಯಲ್ ಆಡಿಟ್ ಘಟಕಗಳು ಕಂಡುಕೊಂಡಿವೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. 

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮ್ಯಾನೇಜ್ಮೆಂಟ್ ಇನ್ಫಾರ್ಮೇಶನ್ ಸಿಸ್ಟಮ್ ಮೂಲಕ ಈ ಮಾಹಿತಿ ಸಂಗ್ರಹಿಸಲಾಗಿದೆ. ದುರುಪಯೋಗವಾದ ಮೊತ್ತದಲ್ಲಿ ಕೇವಲ ರೂ 12.5 ಕೋಟಿ, ಅಂದರೆ ಶೇ1.34ರಷ್ಟನ್ನು ಮಾತ್ರ ಮರುಪಡೆದುಕೊಳ್ಳಲಾಗಿದೆ ಎಂದೂ ಅಂಕಿಅಂಶಗಳು ತಿಳಿಸಿವೆ.

ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 2.65 ಲಕ್ಷ ಗ್ರಾಮ ಪಂಚಾಯತುಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕನಿಷ್ಠ ಒಂದು ಬಾರಿ ಸಾಮಾಜಿಕ ಆಡಿಟ್ ನಡೆಸಲಾಗಿದೆ.

ಕೇಂದ್ರ ಸರಕಾರವು ಮನ್‍ರೇಗಾ ಯೋಜನೆಯಡಿ 2017-18ರಲ್ಲಿ ರೂ 55,659.93 ಕೋಟಿ ಬಿಡುಗಡೆಗೊಳಿಸಿದ್ದು ಪ್ರತಿ ವರ್ಷ ಈ ಮೊತ್ತ ಏರಿಕೆಯಾಗುತ್ತಲೇ ಇದ್ದು 2020-21ರಲ್ಲಿ ರೂ 1,10,355.27 ಕೋಟಿ ಬಿಡುಗಡೆಗೊಳಿಸಲಾಗಿದೆ.

ಲಭ್ಯ ಮಾಹಿತಿಯಂತೆ ತಮಿಳುನಾಡಿನಲ್ಲಿ ಗರಿಷ್ಠ ದುರ್ಬಳಕೆಯಾಗಿದೆ. ಅಲ್ಲಿನ 12,525 ಗ್ರಾಮ ಪಂಚಾಯತುಗಳಲ್ಲಿ ರೂ 245 ಕೋಟಿ ದುರ್ಬಳಕೆಯಾಗಿದೆಯೆನ್ನಲಾಗಿದ್ದು ಆಂಧ್ರ ಪ್ರದೇಶದಲ್ಲಿ ಈ ಮೊತ್ತ ರೂ 239.31 ಕೋಟಿ, ಕರ್ನಾಟಕದಲ್ಲಿ ರೂ 173.6 ಕೊಟಿ, ಬಿಹಾರದಲ್ಲಿ ರೂ 12.34 ಕೋಟಿ, ಪಶ್ಚಿಮ ಬಂಗಾಳದಲ್ಲಿ ರೂ 2.45 ಕೋಟಿ ದುರುಪಯೋಗವಾಗಿದೆ. ಗುಜರಾತ್‍ನಲ್ಲಿ ಕೇವಲ ರೂ 6,749 ದುರುಪಯೋಗವಾಗಿದೆ ಎಂದು ಅಂಕಿಅಂಶಗಳು ತಿಳಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News