ರಾಹುಲ್ ಗಾಂಧಿ ಕುರಿತಾಗಿ ಅಸಂಬದ್ಧ ಟೀಕೆ: ಕೇಂದ್ರ ಸಚಿವರನ್ನು ಸಂಪುಟದಿಂದ ತೆಗೆದುಹಾಕಲು ಕಾಂಗ್ರೆಸ್ ಆಗ್ರಹ

Update: 2021-08-21 12:25 GMT

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಟೀಕಿಸುವ ಭರದಲ್ಲಿ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಎಲ್ಲೇ ಮೀರಿ ವರ್ತಿಸಿದ್ದಾರೆ. ರಾಹುಲ್ ಗಾಂಧಿ ಯಾರಿಗೂ ಉಪಯೋಗವಿಲ್ಲ ಎಂದಿರುವ ದಾನ್ವೆ, ರಾಹುಲ್ ಅವರನ್ನು ಗೂಳಿಗೆ ಹೋಲಿಸಿದ್ದಾರೆ.

ಕೇಂದ್ರ ಸಚಿವರ "ಅಸಭ್ಯ ಮತ್ತು ಆಘಾತಕಾರಿ" ಟೀಕೆಗಳಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಅವರನ್ನು ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ.

ಕೇಂದ್ರ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಗವತ್ ಕರಡ್ ಅವರು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ  ಕೈಗೊಂಡ 'ಜನ್ ಆಶೀರ್ವಾದ ಯಾತ್ರೆ'ಯ ಭಾಗವಾಗಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡುತ್ತಾ ಈ ಮಾತು ಆಡಿದ್ದಾರೆ.

ಮರಾಠಿಯಲ್ಲಿ ಭಾಷಣ ಮಾಡಿದ ದಾನ್ವೆ, "ರಾಹುಲ್ ಗಾಂಧಿ ಯಾರಿಗೂ ಉಪಯೋಗವಿಲ್ಲ. ಅವರು ಗೂಳಿ ಇದ್ದಂತೆ'' ಎಂದರು.

ಹುಟ್ಟಿದ ಗಂಡು ಕರುವನ್ನು ಸ್ಥಳೀಯ ದೇವರಿಗೆ ಅರ್ಪಿಸುವುದು ಗ್ರಾಮೀಣ ಮಹಾರಾಷ್ಟ್ರ ಹಾಗೂ  ದೇಶದ ಇತರ ಕೆಲವು ಭಾಗಗಳಲ್ಲಿ ರೂಢಿಯಾಗಿದೆ. ಆ ಗೂಳಿಯನ್ನು ಯಾವುದೇ ಕೃಷಿ ಅಥವಾ ಸಾರಿಗೆ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ.

ದಾನ್ವೆ  ಟೀಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ  ನಾನಾ ಪಟೋಲೆ  ''ಅವರು (ದಾನ್ವೆ) ಎಲ್ಲ ಎಲ್ಲೆಗಳನ್ನು ಮೀರಿದ್ದಾರೆ. ಅವರ ಟೀಕೆಗಳು ಅಸಭ್ಯ ಮತ್ತು ಆಘಾತಕಾರಿ. ರಾಹುಲ್ ಗಾಂಧಿ ವಿರುದ್ಧ ಇಂತಹ ಅಸಂಬದ್ಧ ಭಾಷೆಯನ್ನು ಬಳಸಿದ್ದಕ್ಕಾಗಿ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕುವಂತೆ ನಾವು ಒತ್ತಾಯಿಸುತ್ತೇವೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News