ಪ್ರಧಾನಿ ಸಮ್ಮುಖದಲ್ಲೇ ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ಧ್ವಜ ಹೊದಿಸಿದ ನಾಯಕರು: ವ್ಯಾಪಕ ಆಕ್ರೋಶ

Update: 2021-08-22 13:37 GMT
Photo: Twitter

ಲಕ್ನೋ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ರವರು‌ ನಿಧನ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿಯೇ ಕಲ್ಯಾಣ್‌ ಸಿಂಗ್‌ ಪಾರ್ಥಿವ ಶರೀರದ ಮೇಲೆ ಇದ್ದ ಭಾರತದ ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜವನ್ನು ಹೊದಿಸಲಾಗಿದ್ದು, ಇದು ಭಾರತದ ತ್ರಿವರ್ಣ ಧ್ವಜಕ್ಕೆ ಮಾಡಿದ ಅಪಮಾನವಾಗಿದೆ ಎಂದು ಸಾಮಾಜಿಕ ತಾಣದಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರದ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರಿದ್ದಂತೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ಧ್ವಜ ಹೊದಿಸುತ್ತಿರುವುದು ಕಂಡು ಬಂದಿದೆ. "ಇದರರ್ಥ ಕಲ್ಯಾಣ್‌ ಸಿಂಗ್‌ ತಮ್ಮ ದೇಶಕ್ಕಿಂತ ಪಕ್ಷವನ್ನೇ ಅತಿಯಾಗಿ ನೆಚ್ಚಿಕೊಂಡಿದ್ದರು ಎಂದಾಗಿದೆ. ನಿಮಗೆ ಸಂಶಯವಿದ್ದರೆ ಬಾಬರಿ ಮಸೀದಿ ಒಡೆದ ಎಪಿಸೋಡ್‌ ಅನ್ನು ಒಮ್ಮೆ ನೋಡಿ" ಎಂದು ಬಳಕೆದಾರರೋರ್ವರು ಟ್ವೀಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News