ಜನಪರ ವೈದ್ಯೆ ಸೇವೆಗೆ ಮರಳಲಿ

Update: 2021-08-25 17:45 GMT

ಮಾನ್ಯರೇ,

ಉಳ್ಳಾಲ ಸರಕಾರಿ ಆಸ್ಪತ್ರೆಯ ವೈದ್ಯೆ ಸಾರ ನೌಷಾದ್‌ರವರು 275 ಸಾಮಾನ್ಯ ಹೆರಿಗೆ ಮತ್ತು 48 ಸಿಸೇರಿಯನ್ ಹೆರಿಗೆ ಮಾಡಿಸುವ ಮೂಲಕ ಬಡವರ ಪಾಲಿಗೆ ಪ್ರೀತಿ ಪಾತ್ರರಾಗಿದ್ದ ವೈದ್ಯೆ. ಇವರ ವಿರುದ್ಧ ಖಾಸಗಿ ಆಸ್ಪತ್ರೆಯವರು ಲಾಬಿ, ನಿರಂತರ ಷಡ್ಯಂತ್ರ ರೂಪಿಸುತ್ತಿದ್ದರು. ಹಾಗೂ ಹೀಗೂ ರಾಜಕೀಯ ಒತ್ತಡ ಹೇರಿ ಮಾನಸಿಕ ಕಿರುಕುಳ ನೀಡಿ ಅವರನ್ನು ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಾಕ್ಟರ್ ಸಾರರವರು ಕರ್ತವ್ಯದ ಸಮಯವಲ್ಲದಿದ್ದರೂ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯರ ಮನೆಯವರು ಫೋನ್ ಮೂಲಕ ಸಂಪರ್ಕಿಸಿದರೂ ತಕ್ಷಣವೇ ಸ್ಪಂದಿಸುತ್ತಿದ್ದರು. ಹೀಗಾಗಿ ಅವರು ಖಾಸಗಿ ಆಸ್ಪತ್ರೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಬಡ ಹೆಂಗಸರು ಹೆರಿಗೆಗೆಂದು ದಾಖಲಾದರೆ ಸಾಮಾನ್ಯ ಹೆರಿಗೆಯಂತೂ ಮಾಡಿಸುವುದಿಲ್ಲ. ಆಕಸ್ಮಾತ್ ಮಾಡಿದರೂ ರೂ. 50,000 ಬಿಲ್ ಮಾಡುತ್ತಾರೆ. ಸಿಸೇರಿಯನ್ ಮೂಲಕವಾದರೆ ಒಂದು ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಇದು ಬಡವರಿಗಂತೂ ಸಾಧ್ಯವಿಲ್ಲ. ಡಾ. ಸಾರರವರು ಉಳ್ಳಾಲ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಬಡವರು ಧೈರ್ಯದಿಂದ ಆಸ್ಪತ್ರೆಗೆ ಬಂದು ನಗುಮುಖದೊಂದಿಗೆ ವಾಪಸಾಗುತ್ತಿದ್ದರು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣವೇ ಡಾ. ಸಾರರವರು ನೀಡಿರುವ ರಾಜೀನಾಮೆಯನ್ನು ಹಿಂದೆ ಪಡೆದುಕೊಳ್ಳುವಂತೆ ಅವರ ಮನವೊಲಿಸಿ ಅವರನ್ನು ಉಳ್ಳಾಲ ಆಸ್ಪತ್ರೆಗೆ ಮರುನೇಮಕ ಮಾಡಿ ಬಡವರಿಗೆ ಸಹಾಯವಾಗುವಂತೆ ಮಾಡಬೇಕಾಗಿದೆ.

Writer - -ಕಬೀರ್ ಉಳ್ಳಾಲ್

contributor

Editor - -ಕಬೀರ್ ಉಳ್ಳಾಲ್

contributor

Similar News