ಸಿರಿವಂತ ದೇಶಗಳ ಆಧುನಿಕ ಯುದ್ಧ ಕಾರ್ಯತಂತ್ರ!

Update: 2021-08-27 07:03 GMT

ಸಿರಿವಂತ, ಮುಖ್ಯವಾಗಿ ಬಂಡವಾಳಶಾಹಿ ದೇಶಗಳು ಜಗತ್ತಿನ ಇತರ ನೈಸರ್ಗಿಕ ಸಂಪದ್ಭರಿತ ಮತ್ತು ಆಯಕಟ್ಟಿನ ದೇಶಗಳಲ್ಲಿ ಆಧುನಿಕ ಯುದ್ಧಗಳನ್ನು ಹೇಗೆ ನಡೆಸುತ್ತವೆ, ಅವುಗಳ ಕಾರ್ಯತಂತ್ರವೇನು ಎಂಬ ಕುರಿತು ತಿಳುವಳಿಕೆ ನೀಡಲು ಜರ್ಮನಿಯಲ್ಲಿ ಆರಂಭವಾದ ಒಂದು ಸಾಮಾಜಿಕ ಕಾರ್ಯಕರ್ತರ ಪ್ರಚಾರಾಭಿಯಾನ ಈಗ ಆ ದೇಶದ ಗಡಿಗಳನ್ನು ದಾಟಿದೆ. ಯುದ್ಧವೆಂದರೆ ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಎರಡು ಸೈನ್ಯಗಳು ಕುರುಕ್ಷೇತ್ರ ಅಥವಾ ಪಾಣಿಪತ್‌ನಂತಹ ಮೈದಾನದಲ್ಲಿ ಎದುರುಬದುರು ನಿಂತು ಕಾದಾಡುವುದು ಎಂಬ ಕಲ್ಪನೆಯೇ ಜನರ ಮುಂದೆ ಸಾಮಾನ್ಯವಾಗಿ ಮೂಡುವುದು. ಆದರೆ, ಆಧುನಿಕ ಯುದ್ಧ ಹೇಗಿರುತ್ತದೆ ಎಂದು ಈ ಬರಹದಲ್ಲಿ ವಿವರಿಸಲಾಗಿದೆ.

ಕೆಳಗೆ ವಿವರಿಸಲಾಗಿರುವ ಕಾರ್ಯತಂತ್ರಗಳನ್ನು ನಿಕರಾಗುವ, ಗ್ವಾಟೆಮಾಲ ಮುಂತಾದ ಮಧ್ಯ ಅಮೆರಿಕ ದೇಶಗಳು; ವೆನೆಝುವೆಲಾ, ಕೊಲಂಬಿಯಾ ಮುಂತಾದ ದಕ್ಷಿಣ ಅಮೆರಿಕ ದೇಶಗಳು; ಕಾಂಗೋ, ಸೊಮಾಲಿಯಾ ಮುಂತಾದ ಆಫ್ರಿಕಾದ ದೇಶಗಳು; ಸಿರಿಯಾ, ಯೆಮನ್‌ನಂತಹ ಪಶ್ಚಿಮ ಏಶ್ಯದ ದೇಶಗಳು ಸೇರಿದಂತೆ ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಬಳಸಲಾಗಿರುವುದನ್ನು ನಾವು ನೋಡಬಹುದು.
1. ಅಸ್ಥಿರಗೊಳಿಸುವುದು
ದಾಳಿಕೋರರು ತಮ್ಮ ಗುರಿಯಾಗಿರುವ ದೇಶದ ಸೂಕ್ಷ್ಮ ಸ್ಥಳಗಳಲ್ಲಿ ಅಶಾಂತಿ, ಕ್ಷೋಭೆ ಉಂಟುಮಾಡುತ್ತಾರೆ. ಧಾರ್ಮಿಕ, ಜನಾಂಗೀಯ, ಪ್ರಾದೇಶಿಕ, ಭಾಷಾ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕವಾದ ಅಸಮಾಧಾನ ಮತ್ತು ವೈಮನಸ್ಸುಗಳು ಇದಕ್ಕೆ ಫಲವತ್ತಾದ ಭೂಮಿಕೆ. ಅವರು ತಾವು ಗುರಿಯಾಗಿಸಿಕೊಂಡಿರುವ ದೇಶವನ್ನು ಅಂತರ್ಯುದ್ಧದ ಅಂಚಿಗೆ ತಳ್ಳುವಷ್ಟು ಅಸ್ಥಿರತೆ ಉಂಟುಮಾಡುತ್ತಾರೆ.
2. ಅವರದನ್ನು ಹೇಗೆ ಮಾಡುತ್ತಾರೆ?
ಮೊತ್ತಮೊದಲಾಗಿ, ಅವರು ತಾವು ಗುರಿಯಾಗಿಸಿರುವ ದೇಶದಲ್ಲಿ ಎಲ್ಲಾ ಅತೃಪ್ತ ಮತ್ತು ಹಿಂಸಾವಾದಿ (ಬಂಡುಕೋರರು/ಬಾಡಿಗೆ ಭಯೋತ್ಪಾದಕರು)ಗಳ ಜೊತೆ ಸಂಪರ್ಕ ಸಾಧಿಸುತ್ತಾರೆ. ಇಂತಹ ಹಿಂಸಾತ್ಮಕ ಬಂಡುಕೋರ ಗುಂಪುಗಳು ತಲೆಗೆಟ್ಟ ಫುಟ್ಬಾಲ್ ಅಭಿಮಾನಿಗಳಿಂದ, ಮತಾಂಧರಿಂದ, ಎಡ ಅಥವಾ ಬಲಪಂಥೀಯ ತೀವ್ರಗಾಮಿಗಳಿಂದ ಅಥವಾ ಕ್ರಿಮಿನಲ್‌ಗಳಿಂದ ತುಂಬಿದೆಯೇ ಎಂಬುದು ಅವರಿಗೆ ಯಾವುದೇ ವ್ಯತ್ಯಾಸ ಉಂಟುಮಾಡುವುದಿಲ್ಲ. ಒಟ್ಟಿನಲ್ಲಿ ಅವರು ಅತೃಪ್ತರು, ಹಿಂಸಾಪ್ರಿಯರು, ತಣ್ಣನೆಯ ರಕ್ತದ ನಿರ್ದಯಿಗಳು ಮತ್ತು ನಿಷ್ಠಾವಂತರು ಆಗಿರಬೇಕು ಅಷ್ಟೇ.
ದಾಳಿಕೋರರು ಇಂತಹ ಪ್ರತಿಯೊಂದು ಗುಂಪಿಗೆ ಉಜ್ವಲ ಭವಿಷ್ಯದ, ಅಧಿಕಾರ ಮತ್ತು ಹಲವಾರು ಲಾಭಗಳ ಆಮಿಷವೊಡ್ಡುತ್ತಾರೆ. ಈ ರೀತಿ ಪ್ರಚೋದಿತರಾದ ಪ್ರತಿಯೊಬ್ಬರೂ, ಏನೇ ಆದರೂ, ತಮ್ಮದೇ ಸ್ವಂತ ಗುರಿಗಳನ್ನು ಸಾಧಿಸಲು ಕಾದಾಡುತ್ತಾರೆ. ಈ ರೀತಿಯಾಗಿ ಹುಟ್ಟಿಬಂದ ಭಯೋತ್ಪಾದಕ ಘಟಕವು ಆರಂಭದಲ್ಲಿ ತಾತ್ಕಾಲಿಕವಾಗಿ- ಸಂಪೂರ್ಣವಾಗಿ ವಿಭಿನ್ನ ಸ್ವರೂಪದ ಗುಂಪುಗಳನ್ನು ಸೇರಿಸಿಕೊಳ್ಳುತ್ತದೆ. ಕೆಲಕಾಲ ಪ್ರತಿಯೊಂದು ಗುಂಪೂ ಸಮಾನ ಗುರಿಯಲ್ಲಿ ತನ್ನ ಲಾಭವನ್ನು ಮಾತ್ರ ಕಾಣುತ್ತದೆ.
ಅವರ ಧ್ಯೇಯವೆಂದರೆ: ಎಲ್ಲಕ್ಕಿಂತಲೂ ಮುಖ್ಯ ಸಮನ್ವಯ. ಒಟ್ಟಾಗಿ ದಾಳಿ ಮಾಡಿ! ಪ್ರಪ್ರತ್ಯೇಕವಾಗಿ ಮುನ್ನುಗ್ಗಿ! ಈ ರೀತಿಯಾಗಿ ದಾಳಿಕೋರರು ಬೇರೆಬೇರೆ ಬಣ್ಣದ ಭಯೋತ್ಪಾದಕ ಗುಂಪುಗಳನ್ನು ಒಟ್ಟು ಸೇರಿಸಿರುತ್ತಾರೆ. ಯಾವುದೇ ಒಂದು ತೀವ್ರವಾದಿ ಗುಂಪು ಬೇರೆ ಗುಂಪುಗಳ ಜೊತೆ ಸೇರದೇ ಇರಬಹುದು. ಅದು ದಾಳಿಕೋರರಿಗೆ ಯಾವುದೇ ವ್ಯತ್ಯಾಸ ಉಂಟುಮಾಡುವುದಿಲ್ಲ. ಅವರು ಅಂತಹ ಗುಂಪನ್ನು ಪ್ರತ್ಯೇಕವಾಗಿ, ಅದರಲ್ಲೂ ಮುಖ್ಯವಾಗಿ ಆಯ್ದ ಗುರಿಗಳ ಮೇಲೆ ದಾಳಿ ನಡೆಸಲು ಬಳಸಿಕೊಳ್ಳುತ್ತಾರೆ. ಉದಾಹರಣೆಗೆ ಆತ್ಮಹತ್ಯಾ ದಾಳಿ ಇತ್ಯಾದಿ.
3. ಶಸ್ತ್ರಾಸ್ತ್ರ, ಸಲಕರಣೆಗಳು ಮತ್ತು ಹಣಕಾಸು
ತನ್ನದೇ ದೇಶದ ಅಥವಾ ವಿದೇಶಿ ಬಾಡಿಗೆ ಸೈನಿಕರನ್ನು ಬಳಸಿಕೊಂಡು ಮೊದಲೇ ಒಟ್ಟುಸೇರಿಸಿದ ಬಂಡುಕೋರ ಗುಂಪುಗಳನ್ನು ತರಬೇತಿಯ ಮೂಲಕ ಭಯೋತ್ಪಾದಕ ಗುಂಪುಗಳಾಗಿ ಮಾಡುತ್ತಾರೆ. ಸಾಧ್ಯವಾದಲ್ಲಿ ಈ ತರಬೇತಿಯನ್ನು ದಾಳಿಗೆ ಒಳಗಾಗುವ ದೇಶದಲ್ಲಿ ಮಾಡದೆ ಬೇರಾವುದೇ ದೇಶದಲ್ಲಿ ಮಾಡಲಾಗುತ್ತದೆ. ಅದಕ್ಕಾಗಿ ಗುರಿಗೆ ಆದಷ್ಟು ಸಮೀಪದ ಸ್ಥಳಗಳಲ್ಲಿ ಗುಪ್ತವಾದ ತರಬೇತಿ ಶಿಬಿರಗಳನ್ನು ಸ್ಥಾಪಿಸಲಾಗುತ್ತದೆ. ಅದು ಸಾಧ್ಯವಿಲ್ಲದಿದ್ದರೆ, ಪ್ರಪಂಚದ ಯಾವುದೇ ಭಾಗದಿಂದ ಅವರನ್ನು ತಂದು ಗುರಿಯಾಗಿಸಿಕೊಂಡ ದೇಶದೊಳಗೆ ತಳ್ಳಲಾಗುತ್ತದೆ. ದಾಳಿಕೋರರು ಇಂತಹ ಗುಂಪುಗಳಿಗೆ ಬೇಕಾದಷ್ಟು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನೀಡುವುದಲ್ಲದೆ, ಹೋರಾಟ ಮಾಡಿದ್ದಕ್ಕೆ ಸಂಬಳವನ್ನೂ ಕೊಡುತ್ತಾರೆ.
4. ವಾಸ್ತವಿಕ ದಾಳಿ
ವಿದೇಶಿ ದಾಳಿಕೋರರು ಈಗ ತಮ್ಮ ಯುದ್ಧ ಯೋಜನೆಗಳನ್ನು ಕ್ರಮಬದ್ಧವಾಗಿ ಕಾರ್ಯರೂಪಕ್ಕೆ ಇಳಿಸುತ್ತಾರೆ. ಕಾರ್ಯಯೋಜನೆಗೆ ಅನುಗುಣವಾಗಿ ಅವರು ನಾಗರಿಕರು ಮತ್ತು ನಾಗರಿಕ ಸೌಲಭ್ಯಗಳನ್ನೂ ಗುರಿಯಾಗಿಸಬಹುದು. ಇದರ ಉದ್ದೇಶವೆಂದರೆ, ಜನರ ಗಮನವನ್ನು ಆದಷ್ಟು ಹೆಚ್ಚು ಸೆಳೆಯುವುದು ಮತ್ತು ವಿದೇಶಿ ನೆರವಿಗಾಗಿ ಅಂಗಲಾಚುವಂತೆ ಮಾಡುವುದು. ಅವರ ಮಾಧ್ಯಮ ಪ್ರಚಾರದ ಕೇಂದ್ರವು ಇವೆಲ್ಲವನ್ನೂ ವ್ಯವಸ್ಥಿತವಾಗಿ ಮಾಡುವ ಗುಂಪುಗಳ ಮೇಲೆ ಇರದೆ, ದೇಶದ ಸರಕಾರವನ್ನು ಹೊಣೆಯಾಗಿಸಿ, ಅದನ್ನು ಕಿತ್ತುಹಾಕಲು ಪ್ರಚೋದಿಸುವುದರ ಮೇಲೆ ಇರುತ್ತದೆ. ಇಲ್ಲವೇ ತಮ್ಮ ವಿರೋಧಿ ಗುಂಪುಗಳನ್ನು ಗುರಿಮಾಡಿರುತ್ತದೆ.
5. ದಾಳಿಕೋರರ ಗುರಿಗಳು
ದಾಳಿಕೋರರ ಗುರಿಗಳು ಯಾವಾಗಲೂ ಒಂದೇ ರೀತಿ ಇರುತ್ತವೆ:
* ಗುರಿಯಾಗಿರುವ ದೇಶವನ್ನು ಒಳಗಿನಿಂದಲೇ ಆದಷ್ಟು ಹೆಚ್ಚು ದುರ್ಬಲಗೊಳಿಸುವುದು ಮತ್ತು ಹೊಣೆಯನ್ನು ನಿರ್ದಿಷ್ಟ ಗುರಿಗಳ ಮೇಲೆ ಹೊರಿಸುವುದು.
* ಸಾಧ್ಯವಾದರೆ, ಭಾರೀ ಗೊಂದಲ ಉಂಟುಮಾಡಿ ಜನರನ್ನು ಅಸಹಾಯಕರು ಮತ್ತು ಶಕ್ತಿಹೀನರನ್ನಾಗಿ ಮಾಡುವುದು.
* ಹೊರಗಿನಿಂದ ಆರ್ಥಿಕ ಮತ್ತು ಸೇನಾ ನೆರವು ಕೋರುವುದನ್ನು ಅನಿವಾರ್ಯಗೊಳಿಸುವುದು ಮತ್ತು ಶರತ್ತುಬದ್ಧ ನೆರವು ನೀಡುವುದು.
* ಪ್ರಸ್ತುತ ಇರುವ ಸರಕಾರವನ್ನು ಉರುಳಿಸಿ, ಬಂಡುಕೋರರನ್ನು ಒಳಗೊಂಡ ಕೈಗೊಂಬೆ ಸರಕಾರವನ್ನು ಸ್ಥಾಪಿಸುವುದು.
* ಕೆಲಸಮಯದಲ್ಲಿ ಸೇನೆಯನ್ನು ಹಿಂದೆಗೆದುಕೊಂಡು ಇಡೀ ದೇಶವೇ ಗೊಂದಲ ಮತ್ತು ಅಂತರ್ಯುದ್ಧದಿಂದ ಜರ್ಜರಿತವಾಗವಂತೆ ಮಾಡುವುದು.
* ಮತ್ತೊಮ್ಮೆ ಸೇನಾ ಮಧ್ಯಪ್ರವೇಶ ಮಾಡಿ, ಹಿಂದೆ ನೆರವಾಗಿದ್ದ ‘ಹೀರೋ’ಗಳನ್ನು ನಿರ್ಮೂಲನ ಮಾಡಿ, ಆ ಗುಂಪುಗಳನ್ನೆಲ್ಲಾ ಭಯೋತ್ಪಾದಕರೆಂದು ಘೋಷಿಸುವುದು ಹಾಗೂ ಜಮೀನು ಮತ್ತು ಸಂಪನ್ಮೂಲಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಮತ್ತು ತಾನು ಮಾಡಿರುವ ಖರ್ಚಿನ ಬಾಬ್ತು ಪರಿಹಾರ ವಸೂಲು ಮಾಡುವುದು.
6. ತನ್ನನ್ನು ತಾನೇ ಆ ದೇಶದ ರಕ್ಷಕನೆಂದು ಬಿಂಬಿಸಿ ಪ್ರಚಾರಾಭಿಯಾನ ಮಾಡುವುದು.
7. ದೊಡ್ಡ ಪ್ರಮಾಣದ ಯುದ್ಧ
ಒಂದೊಂದು ದೇಶದಲ್ಲಿ ಬೇರೆಬೇರೆ ಗುಂಪುಗಳಲ್ಲಿ ಏನು ಮಾಡಲಾಯಿತೋ, ಅದನ್ನು ಮುಂದೆ ಇಡೀ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಡುವುದು. ಇಲ್ಲಿ ಗುಂಪುಗಳ ಬದಲು ದಾಳಿಕೋರರು ಹಲವು ದೇಶಗಳನ್ನೇ ತಮ್ಮ ದಾಳಗಳಾಗಿ ಬಳಸುತ್ತಾರೆ.
* ತಾನು ಏಕಾಂಗಿಯಾಗಿ ಎದುರಿಸಲಾರದ ದೇಶದ ವಿರುದ್ಧ ಇತರ ದೇಶಗಳನ್ನು ಎತ್ತಿಕಟ್ಟುವುದು. ಅದಕ್ಕೆ ಮೊದಲು ಪ್ರಚೋದನೆಗಳನ್ನು ಹುಟ್ಟಿಸಿ ಅದಕ್ಕಾಗಿ ಆ ವಿರೋಧಿ ದೇಶವನ್ನು ದೂರುವುದು. ತನ್ನ ವಿರೋಧಿಯ ವಿರುದ್ಧ ಇತರ ದೇಶಗಳು ತಮ್ಮದೇ ಸೇನೆ, ತಮ್ಮದೇ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸುವಂತೆ ಮಾಡುವುದು. ಅವರ ಸೇನೆಗಳು ಬಹುತೇಕ ನಾಶವಾಗಿ, ಶಸ್ತ್ರಾಸ್ತ್ರಗಳು ಮುಗಿದ ಬಳಿಕವಷ್ಟೇ ನಿಜವಾದ ದಾಳಿಕೋರರು ಹಿನ್ನೆಲೆಯಿಂದ ಹೊರಬಂದು ಎಲ್ಲರ ಮೇಲೆ ಪ್ರಭಾವ ಬೀರಿ ಆಧಿಪತ್ಯ ಸ್ಥಾಪಿಸುವುದು.

8. ಇದರಿಂದ ನಷ್ಟ ಯಾರಿಗೆ?
ದಾಳಿಕೋರರಿಂದ ಮೋಸಹೋಗಿ ಅವರ ಪರವಾಗಿ ತಾವು ಕಾದಾಡಿದ ಗುಂಪುಗಳು, ದಾಳಿಗೆ ಒಳಗಾದ ದೇಶಗಳು ಮತ್ತು ಸಾಮಾನ್ಯ ಜನರಿಗೆ.
ಸಿರಿವಂತ ರಾಷ್ಟ್ರಗಳು ಮಾತ್ರವಲ್ಲ; ಕೆಲವು ದೇಶಗಳಿಗಿಂತಲೂ ನೂರು-ಸಾವಿರ ಪಟ್ಟು ಶ್ರೀಮಂತವಾಗಿರುವ ಕಾರ್ಪೊರೇಟ್ ದೈತ್ಯ ಸಂಸ್ಥೆಗಳು ಕೂಡಾ ಈ ತಂತ್ರವನ್ನು ಬಳಸಿ, ಬಂಡುಕೋರರು, ಭಯೋತ್ಪಾದಕರು ಮತ್ತು ಬಾಡಿಗೆ ಸೈನಿಕರ ಖಾಸಗಿ ಸೇನೆಗಳನ್ನು ಹುಟ್ಟುಹಾಕಿವೆ. ಇವರ ಹೃದಯಕ್ಕೆ ಲಕ್ಷಾಂತರ ಮಹಿಳೆಯರು, ಮಕ್ಕಳು ಮತ್ತು ಸಾಮಾನ್ಯ ನಾಗರಿಕರ ಸಾವುನೋವುಗಳು, ಅತ್ಯಾಚಾರಗಳು, ಹಸಿವು, ರೋಗರುಜಿನಗಳು ತಟ್ಟುವುದಿಲ್ಲ. ಅವರ ಹೃದಯ ಗುರುತಿಸುವುದು ಹಣ ಮತ್ತು ಸಂಪತ್ತನ್ನು ಮಾತ್ರ.
ಹಲವು ವರ್ಷಗಳ ಅಂತರ್ಯುದ್ಧದ ಪರಿಣಾಮವಾಗಿ ದಯನೀಯ ದುರಂತ ಸ್ಥಿತಿಯನ್ನು ತಲುಪಿ, ಮತ್ತೊಮ್ಮೆ ಬಹುಪಕ್ಷೀಯ ಅಂತರ್ಯುದ್ಧದ ಕರಿನೆರಳಿನಲ್ಲಿರುವ ಅಫ್ಘಾನಿಸ್ತಾನದಲ್ಲಿ ಹಲವಾರು ವರ್ಷಗಳಿಂದ ಮೇಲೆ ಹೇಳಿದ ಎಲ್ಲಾ ತಂತ್ರಗಳನ್ನು ಧಾರಾಳವಾಗಿ ಬಳಸಿರುವುದನ್ನು ನಾವು ನೋಡಬಹುದು.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News