ಪೊಲೀಸ್ ಠಾಣೆಯಲ್ಲೇ ಪಾದ್ರಿ ಮೇಲೆ ಹಲ್ಲೆ ನಡೆಸಿದ ಬಲಪಂಥೀಯ ಕಾರ್ಯಕರ್ತರು

Update: 2021-09-06 04:19 GMT

ರಾಯಪುರ: ಮತಾಂತರ ಆರೋಪದಲ್ಲಿ ಪೊಲೀಸ್ ಠಾಣೆಯ ಒಳಗೆಯೇ ಕ್ರೈಸ್ತ ಪಾದ್ರಿ ಹಾಗೂ ಕ್ರೈಸ್ತ ಸಂಘಟನೆಯ ಪದಾಧಿಕಾರಿಯೊಬ್ಬರು ಸೇರಿದಂತೆ ಇಬ್ಬರ ಮೇಲೆ ಬಲಪಂಥೀಯ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ರವಿವಾರ ಛತ್ತೀಸ್‌ಗಢದ ರಾಜಧಾನಿಯಲ್ಲಿ ನಡೆದಿದೆ.

ಕ್ರೈಸ್ತಪಾದ್ರಿ ಹರೀಶ್ ಸಾಹು ಧಾರ್ಮಿಕ ಮತಾಂತರದಲ್ಲಿ ತೊಡಗಿದ್ದಾರೆ ಎಂದು ಆಪಾದಿಸಿದ ಬಲಪಂಥೀಯ ಕಾರ್ಯಕರ್ತರು ಠಾಣೆಯೊಳಗೆಯೇ ಅವರ ಮೇಲೆ ಮತ್ತು ಛತ್ತೀಸ್‌ಗಢ ಕ್ರಿಶ್ಚಿಯನ್ ಫೋರಂ ಪ್ರಧಾನ ಕಾರ್ಯದರ್ಶಿ ಅಂಕುಶ್ ಬರಿಯೇಕರ್ ಮೇಲೆ ಹಲ್ಲೆ ನಡೆಸಿದರು. ಪ್ರಕಾಶ್ ಮಸೀಹ್ ಎಂಬುವವರ ಮೇಲೂ ಪುರಾನಿ ಬಸ್ತಿ ಠಾಣೆಯಲ್ಲಿ ಹಲ್ಲೆ ನಡೆದಿದೆ.

"ಸಾಹು ಧಾರ್ಮಿಕ ಮತಾಂತರ ಮಾಡುತ್ತಿದ್ದಾರೆ ಎಂದು ಬಲಪಂಥೀಯ ಸಂಘಟನೆಗಳು ದೂರು ನೀಡಿದ ಬಳಿಕ ಪಾದ್ರಿಯನ್ನು ಠಾಣೆಗೆ ಕರೆಸಲಾಗಿತ್ತು. ರವಿವಾರ ಬರಿಯೇಕರ್ ಮತ್ತು ಮಸೀಹ್ ಜತೆ ಠಾಣೆಗೆ ಸಾಹು ಆಗಮಿಸಿದರು. ಆಗ ಠಾಣೆಯಲ್ಲಿದ್ದ ಬಲಪಂಥೀಯ ಸಂಘಟನೆಗಳ ಕಾರ್ಯಕತರ್ತರು ಮೂವರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಠಾಣಾಧಿಕಾರಿಯ ಚೇಂಬರ್‌ನಲ್ಲಿ ಹಲ್ಲೆ ನಡೆಸಿದರು" ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ಯದ ಕಬೀರ್‌ಧಾಮ ಜಿಲ್ಲೆಯ ಪೋಲ್ಮಿ ಗ್ರಾಮದಲ್ಲಿ ಸುಮಾರು 100 ಮಂದಿ ಮನೆಯ ಮೇಲೆ ದಾಳಿ ಮಾಡಿ ಕವಾಲ್‌ಸಿಂಗ್ ಪರಾಸ್ತೆ ಎಂಬ 25 ವರ್ಷದ ಕ್ರೈಸ್ತಪಾದ್ರಿ ಮೇಲೆ ಮತಾಂತರ ಆರೋಪದಲ್ಲಿ ಹಲ್ಲೆ ನಡೆಸಿದ ಒಂದು ವಾರದಲ್ಲೇ ಮತ್ತೊಂದು ಇಂಥ ಘಟನೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News