ಆಹಾರ, ವಸತಿ ವ್ಯವಸ್ಥೆ ನಿರಾಕರಣೆ: ಕೋವಿಡ್ ಕರ್ತವ್ಯದ ನರ್ಸ್‌ಗಳ ಆಕ್ರೋಶ

Update: 2021-09-14 05:22 GMT

ಚೆನ್ನೈ : ತಮಗೆ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ನಿರಾಕರಿಸಿದ ಆಸ್ಪತ್ರೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೋವಿಡ್-19 ಕರ್ತವ್ಯಕ್ಕೆ ನಿಯೋಜಿತರಾದ 100ಕ್ಕೂ ಹೆಚ್ಚು ಮಂದಿ ನರ್ಸ್‌ಗಳು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಎದುರು ಸೋಮವಾರ  ಪ್ರತಿಭಟನೆ ನಡೆಸಿದರು.

ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಕಿಲ್ಪಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ 198 ಮಂದಿ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇವರಿಗೆ ಹೋಟೆಲ್‌ನಲ್ಲಿ ಆಹಾರ ಮತ್ತು ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಸೋಮವಾರ ತಕ್ಷಣ ಹೋಟೆಲ್ ಖಾಲಿ ಮಾಡುವಂತೆ ಆಸ್ಪತ್ರೆ ಆಡಳಿತ ಮಂಡಳಿ ಇವರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನರ್ಸ್‌ಗಳು ಪ್ರತಿಭಟನೆ ನಡೆಸಿದರು.

ಧರಣಿ ನಡೆಸಿದ ಅವರು, ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ನಾವು, ದಿಢೀರನೇ ಸೂಚನೆ ನೀಡಿರುವುದರಿಂದ ತಕ್ಷಣಕ್ಕೆ ನಾವು ಎಲ್ಲೂ ಹೋಗುವಂತಿಲ್ಲ ಎಂದು ಹೇಳಿದರು. ಬಳಿಕ ಡಿಎಂಇ ಕ್ಯಾಂಪಸ್‌ಗೆ ತೆರಳಿ ಉನ್ನತ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಎಂಆರ್‌ಬಿ ಕೋವಿಡ್-19 ನರ್ಸ್‌ಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ರಾಜೇಶ್ ಮಾತನಾಡಿ, ಪದೇ ಪದೇ ಆಸ್ಪತ್ರೆ ಈ ರೀತಿ ಮಾಡುತ್ತಿದೆ ಎಂದು ಆಪಾದಿಸಿದರು. "ಎಲ್ಲ ಆಸ್ಪತ್ರೆಗಳು ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿವೆ. ಆದರೆ ಕೋವಿಡ್-19 ಪ್ರಕರಣಗಳು ಕಡಿಮೆಯಾದ ಬಳಿಕ, ನರ್ಸ್‌ಗಳನ್ನು ಅನಪೇಕ್ಷಿತ ಎಂದು ಪರಿಗಣಿಸಲಾಗುತ್ತಿದೆ. ಸರ್ಕಾರ ಇವರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಆರು ತಿಂಗಳ ಸೇವಾವಧಿಯನ್ನು ಗುತ್ತಿಗೆ ಆಧಾರದಲ್ಲಿ ನವೀಕರಿಸಲಾಗುತ್ತಿದೆ. ಇದನ್ನು ಯಾವಾಗ ನಿಲ್ಲಿಸಲಾಗುತ್ತದೆ ಎನ್ನುವ ಅಭದ್ರತೆ ಕಾಡುತ್ತಿದೆ. ಕೋವಿಡ್-19 ಕರ್ತವ್ಯದಲ್ಲಿರುವ ಶೇಕಡ 25ರಷ್ಟು ನರ್ಸ್‌ಗಳಿಗೆ ಮಾತ್ರ ವಸತಿ ಹಾಗೂ ಆಹಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉಳಿದವರು ತಮ್ಮದೇ ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಸ್ಪತ್ರೆಯ ಹಿರಿಯ ನಿರ್ದೇಶಕರು ಹೇಳಿದ್ದಾರೆ. ಡಿಎಂಇ ಅಧಿಕಾರಿಗಳು ಇದೀಗ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News