ಧರ್ಮಗಳ ನಡುವೆ ಒಡಕು ತರಬೇಡಿ

Update: 2021-09-15 17:54 GMT

ಮಾನ್ಯರೇ,

ನಂಜನಗೂಡು ತಾಲೂಕು ಹರದನಹಳ್ಳಿ ಉಚ್ಚಗಣಿ ಗ್ರಾಮದಲ್ಲಿ ದೇವಸ್ಥಾನ ತೆರವು ಕಾರ್ಯಾಚರಣೆ ಬಗ್ಗೆ ಮೈಸೂರು-ಕೊಡಗು ಸಂಸದರು ಹದ್ದು ಮೀರಿ ಮಾತಾಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಯಾಗಿ ‘‘ಮಸೀದಿ, ಗೋರಿ, ಚರ್ಚ್ ಕೇವಲ ಪ್ರಾರ್ಥನಾ ಮಂದಿರಗಳು. ಅವುಗಳನ್ನು ನೀವು ಡೆಮಾಲಿಶ್ ಮಾಡಬಹುದು. ಅಲ್ಲಿ ಯಾವುದೇ ವಿಗ್ರಹಗಳು ಇರುವುದಿಲ್ಲ..’’ ಇಂತಹ ಕೀಳು ಮಟ್ಟದ ಹೇಳಿಕೆ ಕೊಡುವ ಈ ಸಂಸದರು ತಾವು ಪ್ರತಿನಿಧಿಸುವ ಮೈಸೂರು-ಕೊಡಗು ಜನತೆಯ ಎಷ್ಟೋ ಅಗತ್ಯ ಮೂಲಭೂತ ಸೌಕರ್ಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳಿಗೆ ಗಮನಕೊಟ್ಟಿದ್ದಾರೆಯೇ? ಅದನ್ನು ಬಿಟ್ಟು ತಮ್ಮ ರಾಜಕೀಯ ಏಳಿಗೆಗಾಗಿ, ಪ್ರಚಾರಕ್ಕೋಸ್ಕರ ಮಾತಾಡುವುದು ಎಷ್ಟು ಸರಿ..? ಶಾಸಕರು, ಸಂಸದರು, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಬಿಜೆಪಿಯದ್ದೇ ಆಗಿರುವಾಗ ಯಾವ ಸಂದೇಶ ರವಾನೆ ಮಾಡಲು ನಿಮ್ಮ ಪತ್ರಿಕಾ ಗೋಷ್ಠಿ..? ನೀವೂ ಆಡಳಿತ ಪಕ್ಷದ ಭಾಗವಾಗಿದ್ದೀರಿ ಅಲ್ಲವೇ..! ಇನ್ನಾದರೂ ವಿವಾದಾತ್ಮಕ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಿ. ಸಾಧ್ಯವಾದರೆ ಮೈಸೂರು-ಕೊಡಗು ಕ್ಷೇತ್ರಕ್ಕೆ ನೀವು ನಿಮ್ಮ ಅವಧಿಯಲ್ಲಿ ತಂದಿರುವಂತಹ ಯೋಜನೆಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ. ಜೊತೆಗೆ ಅಗತ್ಯವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಹೆಚ್ಚಳ ಇದರ ಬಗ್ಗೆಯೂ ದನಿ ಎತ್ತಿ. ತತ್ತರಿಸುತ್ತಿರುವ ಜನತೆಗೆ ಒಂದಿಷ್ಟು ಸಮಾಧಾನವಾದರೂ ಸಿಗಬಹುದು. ಮೈಸೂರು ಪ್ಯಾರಿಸ್ ಆಗುತ್ತದೆಂದು ಹೇಳಿ ಒಂದು ದಶಕವಾಗುತ್ತಾ ಬಂತು. ಈ ಬಗ್ಗೆ ಮಾತನಾಡಿ.

ನೀವು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೀರಿ ಹೊರತು ಧರ್ಮದ ಹೆಸರಿನಲ್ಲಿ ಅಲ್ಲ..! ಸರ್ವಧರ್ಮದವರನ್ನು, ಅವರ ಭಾವನೆಗಳನ್ನು ಗೌರವಿಸುವ ಹೊಣೆ ನಿಮ್ಮ ಮೇಲಿದೆ. ನಿಮ್ಮ ಸ್ವಾರ್ಥಕ್ಕಾಗಿ ಧರ್ಮಗಳನ್ನು ಬೀದಿಗೆ ತಂದು ಅಶಾಂತಿ ವಾತಾವರಣ ನಿರ್ಮಿಸುವುದು ಸರಿಯಲ್ಲ. 

Writer - -ಅನಿಲ್ ಕುಮಾರ್, ನಂಜನಗೂಡು

contributor

Editor - -ಅನಿಲ್ ಕುಮಾರ್, ನಂಜನಗೂಡು

contributor

Similar News