ಸಾವರ್ಕರ್, ಗೋಳ್ವಾಲ್ಕರ್ ಕೃತಿಗಳನ್ನು ಪಠ್ಯದಲ್ಲಿ ಸೇರಿಸದಿರಲು ಕಣ್ಣೂರು ವಿ.ವಿ. ನಿರ್ಧಾರ

Update: 2021-09-17 15:41 GMT
Photo: Deccan chronicle

ಮುಂಬೈ, ಸೆ. 17: ಆಡಳಿತ ಹಾಗೂ ರಾಜಕೀಯದ ಸ್ನಾತಕೋತ್ತರ ಕೋರ್ಸ್ನ ಪಠ್ಯ ಕ್ರಮದಲ್ಲಿ ವಿ.ಡಿ. ಸಾವರ್ಕರ್ ಹಾಗೂ ಎಂ.ಎಸ್. ಗೋಳ್ವಾಲ್ಕರ್ ಅವರ ಕೃತಿಗಳನ್ನು ಬೋಧಿಸದಿರಲು ಕಣ್ಣೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಪಠ್ಯಕ್ರಮವನ್ನು ಮರು ಪರಿಶೀಲಿಸಲು ವಿಶ್ವವಿದ್ಯಾನಿಲಯ ನಿಯೋಜಿಸಿದ ಇಬ್ಬರು ಸದಸ್ಯರ ಸಮಿತಿ ಶಿಫಾರಸನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಸಾವರ್ಕರ್ ಅವರ ‘ಹಿಂದುತ್ವ: ವು ಈಸ್ ಹಿಂದು’, ಗೋಳ್ವಾಲ್ಕರ್ ಅವರ ‘ಬಂಚ್ಸ್ ಆಫ್ ಥಾಟ್ಸ್’, ‘ವಿ ಆರ್ ಅವರ್ ನೇಷನ್ಹುಡ್ ಡಿಫೈನ್ಡ್’, ದೀನದಯಾಳ್ ಉಪಾಧ್ಯಾಯ ಅವರ ‘ಇಂಟಗ್ರಲ್ ಹ್ಯೂಮನಿಸಂ’ ಹಾಗೂ ಬಾಲರಾಜ್ ಮಧೋಕ್ ಅವರ ‘ಇಂಡಿಯನೈಸೇಷನ್: ವಾಟ್, ವೈ ಆ್ಯಂಡ್ ಹೌ’ ಮೊದಲಾದ ಕೃತಿಗಳ ಆಯ್ದ ಭಾಗಗಳನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದನ್ನು ಎಡಪಂಥೀಯ ಚಿಂತಕರು ಹಾಗೂ ವಿಪಕ್ಷಗಳು ಖಂಡಿಸಿವೆ. ಆಡಳಿತಾರೂಢ ಸಿಪಿಎಂ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಅನುವು ಮಾಡಿ ಕೊಡುತ್ತಿದೆ ಎಂದು ಆರೋಪಿಸಿದೆ. 

ಆದರೆ, ಉಪ ಕುಲುಪತಿ ಪ್ರೊ. ಗೋಪಿನಾಥ್ ರವೀಂದ್ರನ್ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿ ಪಿಣರಾಯಿ ನೇತೃತ್ವದ ಸರಕಾರ ಇದನ್ನು ವಿರೋಧಿಸಿದೆ. ರವೀಂದ್ರನ್ ಕೋರ್ಸ್ನ ಮೂರನೆ ಸೆಮಿಸ್ಟರ್ಗೆ ಸೇರಿಸಲಾಗಿದ್ದ ವಿಷಯ ‘ಡಿಬೇಟ್ ಆನ್ ಮಾಡರ್ನ್ ಇಂಡಿಯನ್ ಪೊಲೀಟಿಕಲ್ ಥಾಟ್ಸ್’ ಅನ್ನು ಕೈಬಿಡಲಾಗಿದೆ ಎಂದು ಅವರು ಗುರುವಾರ ಹೇಳಿದ್ದಾರೆ. ಅಗತ್ಯದ ಬದಲಾವಣೆಗಳನ್ನು ಮಾಡಿದ ಬಳಿಕ ಈ ವಿಷಯವನ್ನು ನಾಲ್ಕನೇ ಸಮಿಸ್ಟರ್ಗೆ ಸೇರಿಸಲಾಗುವುದು. ಸೆಪ್ಟಂಬರ್ 29ರಂದು ನಡೆಯುವ ಶೈಕ್ಷಣಿಕ ಮಂಡಳಿಯ ಸಭೆಯ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. 

ವಿಶ್ವವಿದ್ಯಾನಿಲಯ ಪಠ್ಯ ಕ್ರಮವನ್ನು ತಡೆ ಹಿಡಿದಿರುವುದನ್ನು ಬಿಜೆಪಿ ಖಂಡಿಸಿದೆ. ಇದು ಕೇರಳದಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್ ನ ಜಾಲವನ್ನು ಸಾಬೀತುಪಡಿಸಿದೆ ಎಂದು ಅದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News