​ಲಸಿಕೆ ನೀಡಿಕೆಯಲ್ಲಿ ಭಾರತ ವಿಶ್ವದಾಖಲೆ

Update: 2021-09-18 03:31 GMT

ಹೊಸದಿಲ್ಲಿ: ಭಾರತದಲ್ಲಿ ಶುಕ್ರವಾರ ಒಂದೇ ದಿನ 2.5 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ ಎಂದು ಸರ್ಕಾರ ಪ್ರಕಟಿಸಿದೆ.

ಈ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿರುವುದನ್ನು ಕೇಂದ್ರ ಆರೋಗ್ಯ ಖಾತೆ ಸಚಿವ ಮನ್‌ಸುಖ್ ಮಾಂಡವಿಯಾ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, "ಇಂದಿನ ದಾಖಲೆ ಸಂಖ್ಯೆಯ ಲಸಿಕೆ ನೀಡಿಕೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡಬೇಕು" ಎಂದು ಹೇಳಿದ್ದರು. ಇದಕ್ಕೆ ಕಠಿಣ ಪರಿಶ್ರಮ ವಹಿಸಿದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರನ್ನು ಅಭಿನಂದಿಸಿದ್ದರು.

ಪ್ರಧಾನಿ ಮೋದಿ ಹುಟ್ಟುಹಬ್ಬದಂದು 2.5 ಕೋಟಿ ಲಸಿಕೆ ಡೋಸ್ ನೀಡಲು ಗುರಿ ನಿಗದಿಪಡಿಸಲಾಗಿತ್ತು. ಆದರೆ ಗುರಿ ಮೀರಿ 10390 ಹೆಚ್ಚುವರಿ ಡೋಸ್ ನೀಡಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ಚೀನಾದಲ್ಲಿ ಇದುವರೆಗಿನ ಗರಿಷ್ಠ ಅಂದರೆ ಜೂನ್‌ನಲ್ಲಿ ಒಂದೇ ದಿನ 2.47 ಕೋಟಿ ಮಂದಿಗೆ ಲಸಿಕೆ ನೀಡಲಾಗಿತ್ತು.

ಸಂಜೆಯ ವೇಳೆಗೆ ಭಾರತದ ಲಸಿಕೆ ನೀಡಿಕೆ ಸಂಖ್ಯೆ ಎರಡು ಕೋಟಿ ದಾಟಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಕಚೇರಿ ಟ್ವೀಟ್ ಮಾಡಿ ಭಾರತವನ್ನು ಅಭಿನಂದಿಸಿತ್ತು.

ಸರ್ಕಾರದ ಟ್ರ್ಯಾಕರ್ ಪ್ರಕಾರ ಪ್ರತಿ ಸೆಕೆಂಡಿಗೆ 800 ಲಸಿಕಾ ಡೋಸ್‌ಗಳನ್ನು ನೀಡಲಾಗಿದ್ದು, ನಿಮಿಷಕ್ಕೆ 48 ಸಾವಿರದಂರೆ ಲಸಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್.ಎಸ್.ಶರ್ಮಾ ಹೇಳಿದ್ದಾರೆ. ಒಂದು ತಿಂಗಳ ನಿರಂತರ ಪ್ರಯತ್ನದಿಂದ ಈ ಮೈಲುಗಲ್ಲು ಸಾಧಿಸಲಾಗಿದೆ ಎಂದು ಸರ್ಕಾರಿ ತಜ್ಞ ಡಾ.ಎನ್.ಕೆ.ಅರೋರಾ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News