ರಾಜಕೀಯ ಸಂಘರ್ಷಗಳಲ್ಲಿ ಈಶಾನ್ಯ ರಾಜ್ಯಗಳ ಪೈಕಿ ತ್ರಿಪುರಾ ಅಗ್ರಸ್ಥಾನ :ಎನ್ ಸಿ ಆರ್ ಬಿ

Update: 2021-09-19 16:02 GMT

ಅಗರ್ತಲಾ,ಸೆ.19: ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್ ಸಿ ಆರ್ ಬಿ)ದ ‘ಭಾರತದಲ್ಲಿ ಅಪರಾಧಗಳು 2020 ’ವರದಿಯಂತೆ ರಾಜಕೀಯ ಸಂಘರ್ಷಗಳ ವಿಷಯದಲ್ಲಿ ಈಶಾನ್ಯ ರಾಜ್ಯಗಳ ಪೈಕಿ ತ್ರಿಪುರಾ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಶೇ.0.5 ಅಪರಾಧಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಶೇ.0.1 ರಾಜಕೀಯ ಸಂಘರ್ಷಗಳೊಂದಿಗೆ ಅರುಣಾಚಲ ಪ್ರದೇಶ ದ್ವಿತೀಯ ಸ್ಥಾನದಲ್ಲಿದ್ದು, ಮಣಿಪುರ ನಂತರದ ಸ್ಥಾನದಲ್ಲಿದೆ.

ಈ ಮೂರು ರಾಜ್ಯಗಳನ್ನು ಬಿಟ್ಟರೆ ಇತರ ಯಾವುದೇ ಈಶಾನ್ಯ ರಾಜ್ಯದಲ್ಲಿ ಕಳೆದ ವರ್ಷ ಯಾವುದೇ ರಾಜಕೀಯ ಸಂಘರ್ಷ ದಾಖಲಾಗಿಲ್ಲ.

2020ರಲ್ಲಿ ತ್ರಿಪುರಾದಲ್ಲಿ ಸುಮಾರು 22 ರಾಜಕೀಯ ಸಂಘರ್ಷಗಳ ಪ್ರಕರಣಗಳು ದಾಖಲಾಗಿದ್ದರೆ,ಅರುಣಾಚಲ ಪ್ರದೇಶ ಮತ್ತು ಮಣಿಪುರಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.
 
ಕಳೆದ ವರ್ಷ ಅಸ್ಸಾಮಿನಲ್ಲಿ ಸಾರ್ವಜನಿಕ ಶಾಂತಿಭಂಗ ಅಪರಾಧಗಳ ವರ್ಗದಲ್ಲಿ ಒಟ್ಟು 829 ದಂಗೆ ಪ್ರಕರಣಗಳು ದಾಖಲಾಗಿವೆ. ತ್ರಿಪುರಾದಲ್ಲಿ ಇಂತಹ 83 ಪ್ರಕರಣಗಳು ದಾಖಲಾಗಿದ್ದರೆ,ಮಣಿಪುರದಲ್ಲಿ 60,ಅರುಣಾಚಲ ಪ್ರದೇಶದಲ್ಲಿ 10,ಮೇಘಾಲಯದಲ್ಲಿ 2 ಹಾಗೂ ಸಿಕ್ಕಿಂ ಮತ್ತು ಮಿಜೋರಾಮ್ ಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ. ಆದರೆ ನಾಗಾಲ್ಯಾಂಡ್ನಲ್ಲಿ ಇಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ.

ಕೋಮು ಮತ್ತು ಧಾರ್ಮಿಕ ಹಿಂಸೆಗೆ ಸಂಬಂಧಿಸಿದಂತೆ ಅಸ್ಸಾಮಿನಲ್ಲಿ 17 ಪ್ರಕರಣಗಳು ದಾಖಲಾಗಿದ್ದರೆ,ಆರು ಪ್ರಕರಣಗಳೊಂದಿಗೆ ಅರುಣಾಚಲ ಪ್ರದೇಶ ನಂತರದ ಸ್ಥಾನದಲ್ಲಿದೆ.
2020ರಲ್ಲಿ ಮಣಿಪುರದಲ್ಲಿ ಐದು ಪಂಥೀಯ ಸಂಘರ್ಷಗಳ ಪ್ರಕರಣಗಳು ದಾಖಲಾಗಿದ್ದರೆ, ಇತರ ಯಾವುದೇ ಈಶಾನ್ಯ ರಾಜ್ಯದಲ್ಲಿ ಇಂತಹ ಪ್ರಕರಣಗಳು ದಾಖಲಾಗಿಲ್ಲ. ಅಸ್ಸಾಮಿನಲ್ಲಿ ಕಳೆದ ವರ್ಷ 1,131 ಕೊಲೆ ಪ್ರಕರಣಗಳು ದಾಖಲಾಗಿದ್ದು, ತ್ರಿಪುರಾ (114),ಮೇಘಾಲಯ (79),ಮಣಿಪುರ (46),ಅರುಣಾಚಲ ಪ್ರದೇಶ (45),ಮಿಝೋರಾಮ್ (28),ನಾಗಾಲ್ಯಾಂಡ್ (25) ಮತ್ತು ಸಿಕ್ಕಿಂ (11) ನಂತರದ ಸ್ಥಾನಗಳಲ್ಲಿವೆ.
 
ವೈದ್ಯಕೀಯ ನಿರ್ಲಕ್ಷದ ಒಂಭತ್ತು ಪ್ರಕರಣಗಳು ಅಸ್ಸಾಮಿನಲ್ಲಿ ಮತ್ತು ಎರಡು ಪ್ರಕರಣಗಳು ತ್ರಿಪುರಾದಲ್ಲಿ ದಾಖಲಾಗಿದ್ದರೆ,ಇತರ ಯಾವುದೇ ಈಶಾನ್ಯ ರಾಜ್ಯದಲ್ಲಿ ಇಂತಹ ಪ್ರಕರಣಗಳು ದಾಖಲಾಗಿಲ್ಲ ಎಂದು ವರದಿಯು ತಿಳಿಸಿದೆ.
  
ಅಸ್ಸಾಮಿನಲ್ಲಿ 148 ವರದಕ್ಷಿಣೆ ಸಾವುಗಳು ವರದಿಯಾಗಿದ್ದರೆ, ತ್ರಿಪುರಾ (23), ಮಣಿಪುರ,ನಾಗಾಲ್ಯಾಂಡ್ ಮತ್ತು ಮೇಘಾಲಯ (ತಲಾ ಒಂದು) ನಂತರದ ಸ್ಥಾನಗಳಲ್ಲಿವೆ. ಇತರ ಈಶಾನ್ಯ ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗಿಲ್ಲ.

ಅಸ್ಸಾಮಿನಲ್ಲಿ 1316 ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದರೆ ತ್ರಿಪುರಾದಲ್ಲಿ 117,ಮಣಿಪುರದಲ್ಲಿ 109,ಮೇಘಾಲಯದಲ್ಲಿ 58,ಅರುಣಾಚಲ ಪ್ರದೇಶದಲ್ಲಿ 37,ನಾಗಾಲ್ಯಾಂಡ್ನಲ್ಲಿ 24, ಮಿಝೋರಾಮ್ ನಲ್ಲಿ 10 ಮತ್ತು ಸಿಕ್ಕಿಮ್ ನಲ್ಲಿ ಏಳು ಪ್ರಕರಣಗಳು ದಾಖಲಾಗಿವೆ.

ಅತ್ಯಾಚಾರ ಪ್ರಕರಣಗಳಲ್ಲಿಯೂ ಅಸ್ಸಾಂ (1,657) ಮುಂಚೂಣಿಯಲ್ಲಿದೆ. ತ್ರಿಪುರಾ (79),ಮೇಘಾಲಯ (67),ಅರುಣಾಚಲ ಪ್ರದೇಶ (60), ಮಿಝೋರಾಮ್ (33),ಮಣಿಪುರ (32),ಸಿಕ್ಕಿಂ (12) ಮತ್ತು ನಾಗಾಲ್ಯಾಂಡ್ (4) ನಂತರದ ಸ್ಥಾನಗಳಲ್ಲಿವೆ. ಅತ್ಯಂತ ಹೆಚ್ಚು,6934 ಅಪಹರಣ ಪ್ರಕರಣಗಳು ಅಸ್ಸಾಮಿನಲ್ಲಿ ದಾಖಲಾಗಿದ್ದರೆ,ತ್ರಿಪುರಾ (127),ಮೇಘಾಲಯ (91),ಮಣಿಪುರ (81), ಅರುಣಾಚಲ ಪ್ರದೇಶ (78),ಸಿಕ್ಕಿಂ(32),ನಾಗಾಲ್ಯಾಂಡ್ (24) ಮತ್ತು ಮಿಝೋರಾಮ್ (3)ನಂತರದ ಸ್ಥಾನಗಳಲ್ಲಿವೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News