ಪೆಗಾಸಸ್‌ ಪ್ರಕರಣ: ಮುಂದಿನ ವಾರ ವಿಚಾರಣಾ ಸಮಿತಿ ರಚಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿಕೆ

Update: 2021-09-23 07:14 GMT

ಹೊಸದಿಲ್ಲಿ: ಪೆಗಾಸಸ್‌ ಹಗರಣದ ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ ಮುಂದಿನ ವಾರ ಸಮಿತಿ ರಚಿಸಲಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಗುರುವಾರ ಬೆಳಗ್ಗೆ ಹೇಳಿಕೆ ನೀಡಿದ್ದಾರೆ. ಮುಂದಿನ ವಾರ ಈ ಕುರಿತು ಮಧ್ಯಂತರ ಆದೇಶ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.

ಪ್ರತ್ಯೇಕ ಪ್ರಕರಣವೊಂದನ್ನು ಆಲಿಸುತ್ತಿದ್ದ ಸಂದರ್ಭದಲ್ಲಿ ಪೆಗಾಸಸ್‌ ಕುರಿತು ಅರ್ಜಿಯನ್ನೂ ವಾದಿಸುತ್ತಿರುವ ವಕೀಲರನ್ನು ಉದ್ದೇಶಿಸಿ ಮಾತನಾಡುತ್ತಾ ಸಿಜೆಐ ಹೇಳಿದ್ದಾಗಿ ndtv.com ವರದಿ ಮಾಡಿದೆ.

"ಈ ಪ್ರಕರಣಕ್ಕೆ ಸಂಬಂಧಿಸಿದ ಆದೇಶವನ್ನು ಈ ವಾರಕ್ಕೂ ಮುಂಚೆ ನೀಡಲು ಬಯಸಿದ್ದೇವೆ. ಕೆಲವು ತಜ್ಞ ಸದಸ್ಯರನ್ನು ಸಮಿತಿಗೆ ಪರಿಗಣಿಸುವ ಕುರಿತು ಯೋಚಿಸುತ್ತಿದ್ದೇವೆ. ಕೆಲವರು ವೈಯಕ್ತಿಕ ಕಾರಣಗಳಿಂದಾಗಿ ಸಮಿತಿಯ ಭಾಗವಾಗಲು ನಿರಾಕರಿಸಿದ್ದರಿಂದ ಇದು ವಿಳಂಬವಾಗುತ್ತಿದೆ" ಎಂದು ಅವರು ಹೇಳಿದರು.

ಇಸ್ರೇಲ್‌ ಮೂಲದ ಸ್ಪೈವೇರ್‌ ಪೆಗಾಸಸ್‌ ಕುರಿತಾದಂತೆ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಮೇಲ್ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಆಲಿಸುತ್ತಿದೆ. thewire ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಒಕ್ಕೂಟಗಳು ಸೇರಿಕೊಂಡು ಪೆಗಾಸಸ್‌ ಕುರಿತಾದ ತನಿಖಾ ವರದಿಯನ್ನು ರಚಿಸಿತ್ತು. 

ದಿ ವೈರ್ ವರದಿಗಳು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಸೇರಿದಂತೆ 300 ಕ್ಕೂ ಹೆಚ್ಚು ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರ ದೂರವಾಣಿ ಸಂಖ್ಯೆಗಳನ್ನು ಸಂಭಾವ್ಯ ಗುರಿಗಳ ಪಟ್ಟಿಯಲ್ಲಿದೆ ಎಂದು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News