"ಗ್ರಾಮದ ಮಹಿಳೆಯರ ಬಟ್ಟೆ ಒಗೆದು ಇಸ್ತ್ರಿ ಹಾಕಿಕೊಡಬೇಕು": ಷರತ್ತಿನೊಂದಿಗೆ ಲೈಂಗಿಕ ಕಿರುಕುಳ ಪ್ರಕರಣ ಆರೋಪಿಗೆ ಜಾಮೀನು

Update: 2021-09-23 07:43 GMT

ಪಾಟ್ನಾ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತನಾಗಿದ್ದ ಯುವಕನೊಬ್ಬನಿಗೆ ಜಾಮೀನು ನೀಡಿದ ಮಧುಬನಿ ಜಿಲ್ಲೆಯ ಝಂಝರಪುರ್ ನ್ಯಾಯಾಲಯ, ಅದಕ್ಕೊಂದು ಷರತ್ತನ್ನೂ ವಿಧಿಸಿದೆ. ಆರೋಪಿಯು ಆರು ತಿಂಗಳುಗಳ ಕಾಲ ತನ್ನ ಗ್ರಾಮದ ಎಲ್ಲಾ ಮಹಿಳೆಯರ ಬಟ್ಟೆಗಳನ್ನು ಒಗೆದು ಇಸ್ತ್ರಿ ಹಾಕಿ ಕೊಡಬೇಕಿದೆ ಎಂದು ವರದಿಯಾಗಿದೆ.

ಆತ ತನ್ನ ಆರು ತಿಂಗಳ ಉಚಿತ ಸೇವೆಯನ್ನು ಪೂರ್ಣಗೊಳಿಸಿದ ನಂತರ ಈ ಕುರಿತ ಪ್ರಮಾಣಪತ್ರವನ್ನು ಗ್ರಾಮದ ಮುಖ್ಯಸ್ಥ, ಸರಪಂಚ ಹಾಗೂ ಇತರ ಸರ್ಕಾರಿ ಅಧಿಕಾರಿಯಿಂದ ಪಡೆದು ಹಾಜರುಪಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅವಿನಾಶ್ ಕುಮಾರ್ ತಮ್ಮ ಜಾಮೀನು ಆದೇಶದಲ್ಲಿ ತಿಳಿಸಿದ್ದಾರೆ.

ಆರೋಪಿ ಆರು ತಿಂಗಳುಗಳ ಕಾಲ ಗ್ರಾಮದ ಎಲ್ಲಾ ಮಹಿಳೆಯರ ಬಟ್ಟೆಗಳನ್ನು ಸಂಗ್ರಹಿಸಿ ಅವುಗಳನ್ನು ಒಗೆದು ನಂತರ ಇಸ್ತ್ರಿ ಹಾಕಿ ನೀಡಬೇಕು. ಈ ರೀತಿಯ ಸೇವೆಯಿಂದಾಗಿ ಆತನಲ್ಲಿ ಮಹಿಳೆಯರ ಬಗ್ಗೆ ಗೌರವ ಭಾವನೆ ಮೂಡುತ್ತದೆ ಎಂದು ನ್ಯಾಯಾಧೀಶರು ಹೇಳಿದರು.

ಪ್ರಕರಣದ ಆರೋಪಿ ಲಲನ್ ಕುಮಾರ್ ಸಫಿ(20) ಎಂಬವನಾಗಿದ್ದಾನೆ. ಆತ ಪ್ರತಿ ಮನೆಗೆ ತೆರಳಿ ಬಟ್ಟೆಗಳನ್ನು ಸಂಗ್ರಹಿಸಬೇಕು ಮತ್ತು ಅವುಗಳನ್ನು ಅಲ್ಲಿಗೆ ತೆರಳಿ ವಾಪಸ್ ನೀಡಬೇಕು ಎಂದು ಹೇಳಿದ ನ್ಯಾಯಾಲಯ ಆತನಿಗೆ ತಲಾ ರೂ 10,000 ಮೊತ್ತದ ಎರಡು ಬೇಲ್ ಬಾಂಡ್‍ಗಳನ್ನೂ ಹಾಜರುಪಡಿಸುವಂತೆ ಸೂಚಿಸಿದೆ.

ಮಝೌರ ಗ್ರಾಮದ ಯುವಕ ಎಪ್ರಿಲ್ 17ರ ರಾತ್ರಿ ಲೌಕಾಹ ಬಜಾರ್ ಪ್ರದೇಶದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆತನನ್ನು ಅದೇ ದಿನ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News