ಆರೆಸ್ಸೆಸ್-ತಾಲಿಬಾನ್‌ ಹೋಲಿಕೆ: ಜಾವೇದ್‌ ಅಖ್ತರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

Update: 2021-09-23 08:17 GMT

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್‌ ನೊಂದಿಗೆ ಹೋಲಿಕೆ ಮಾಡಿರುವುದಕ್ಕಾಗಿ ಮುಂಬೈನ ಬರಹಗಾರ, ಸಾಹಿತಿ ಜಾವೇದ್‌ ಅಖ್ತರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು barandbench ವರದಿ ಮಾಡಿದೆ. ಆರೆಸ್ಸೆಸ್‌ ಕಾರ್ಯಕರ್ತ ಹಾಗೂ ವಕೀಲ ಧ್ರುತ್ಮನ್‌ ಜೋಶಿ ಎಂಬವರು ದೂರು ದಾಖಲಿಸಿದ್ದು, "ಜಾವೇದ್‌ ಅಖ್ತರ್‌ ತಮ್ಮ ಹೇಳಿಕೆಯಿಂದ ಹಿಂದೂಗಳನ್ನು ನಿಂದಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.

"ಆರೆಸ್ಸೆಸ್‌ ಅನ್ನು ನಿಂದಿಸುವ ಮತ್ತು ಅವಹೇಳನ ಮಾಡುವ ಸಲುವಾಗಿ ಜಾವೇದ್‌ ಅಖ್ತರ್‌ ರವರು ಉತ್ತಮ ಯೋಜಿತ ಆಲೋಚನೆ ಮತ್ತು ಲೆಕ್ಕಾಚಾರಗಳ ಮೂಲಕ ಬೆಂಬಲಿಗರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದ್ದಾರೆ" ಎಂದು ಜೋಶಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವಾರು ಕೇಂದ್ರ ಸಚಿವರು ಆರೆಸ್ಸೆಸ್‌ ಸದಸ್ಯರು ಎಂಬುವುದು ಅಖ್ತರ್‌ ಗೆ ತಿಳಿದಿದ್ದರು ಅವರು ಯಾವುದೇ ಪುರಾವೆಗಳಿಲ್ಲದೇ ಸಂಸ್ಥೆಯನ್ನು ಟೀಕಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.

ವರದಿಯ ಪ್ರಕಾರ, "ಆರೆಸ್ಸೆಸ್ ಮತ್ತು ಆರೆಸ್ಸೆಸ್ ಅನ್ನು ಬೆಂಬಲಿಸುವ ರಾಷ್ಟ್ರೀಯವಾದಿಗಳ ವಿರುದ್ಧ ದ್ವೇಷವನ್ನು ಉತ್ತೇಜಿಸಲು" ಅಖ್ತರ್ ಈ ಹೇಳಿಕೆ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಮುಂಬೈನ ಕುರ್ಲಾದಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಅಕ್ಟೋಬರ್ 30 ರಂದು ಜೋಶಿ ನೀಡಿದ ದೂರನ್ನು ಆಲಿಸಲಿದೆ.

ಮುಂಬೈನಲ್ಲಿರುವ ಇನ್ನೊಬ್ಬ ವಕೀಲರು ಬುಧವಾರ ಜಾವೇದ್‌ ಅಖ್ತರ್‌ ಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದು, ಆರೆಸ್ಸೆಸ್ ನ ಪ್ರತಿಷ್ಠೆಗೆ ಕಳಂಕ ತಂದಿರುವುದಾಗಿ ಆರೋಪಿಸಿ 100 ಕೋಟಿ ರೂ, ನಷ್ಟವನ್ನು ಕೋರಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News