ಪಂಜಾಬ್ ಮಾಜಿ ಸಿಎಂ ಅಮರಿಂದರ್ ‘ರಾಷ್ಟ್ರೀಯವಾದಿ’ ಎಂದು ಹಾಡಿಹೊಗಳಿದ ಬಿಜೆಪಿ

Update: 2021-09-24 07:20 GMT

ಹೊಸದಿಲ್ಲಿ: ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಆಂತರಿಕ ಜಗಳದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವು ದಿನಗಳ ಬಳಿಕ ಭಾರತೀಯ ಜನತಾ ಪಕ್ಷದ ನಾಯಕತ್ವವು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮೇಲೆ ಹೊಸ ಪ್ರೀತಿಯನ್ನು ಬೆಳೆಸಿಕೊಂಡಿದೆ. ಅವರನ್ನು ‘ರಾಷ್ಟ್ರೀಯವಾದಿ’ ಎಂದು ಕರೆದಿದೆ.

ಸಿಂಗ್ ಅವರ ನಾಲ್ಕೂವರೆ ವರ್ಷದ ಆಡಳಿತದ ಅವಧಿಯಲ್ಲಿ ಅವರ ವಿರುದ್ದ  ನಿರಂತರವಾಗಿ ವಾಗ್ದಾಳಿ ನಡೆಸಿದ್ದ  ಬಿಜೆಪಿ ಈಗ ಅವರ ನಿರ್ಗಮನವನ್ನು 'ರಾಜಕೀಯ ಕೊಲೆ' ಎಂದು ಕರೆದಿದೆ. ಕಾಂಗ್ರೆಸ್ ಗೇಮ್ ಪ್ಲಾನ್ ಗೆ ಅಮರಿಂದರ್ ಅಡ್ಡಿಯಾಗಿದ್ದರು. ಹೀಗಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದಿದೆ.

ಬಿಜೆಪಿ ಪಕ್ಷವು ಪಂಜಾಬ್ ನಲ್ಲಿ ನಡೆಯುತ್ತಿರುವ  ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ನಂತರ  ಸಂಪೂರ್ಣ ಮೂಲೆಗುಂಪಾಗಿದೆ. ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮೊದಲು ರಾಜಕೀಯ ಅಸ್ತಿತ್ವವನ್ನು  ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ.  ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹಾಗೂ  ಆ ದೇಶದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರೊಂದಿಗಿನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸ್ನೇಹವನ್ನು ಅಮರಿಂದರ್ ಪ್ರಶ್ನಿಸಿದ್ದರು.  ಸಿಂಗ್ ಅವರ ಹೇಳಿಕೆಯ ಸದುಪಯೋಗಪಡೆಯಲು ಬಿಜೆಪಿ ಎದುರು ನೋಡುತ್ತಿದೆ.  

ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ' ಅಮರಿಂದರ್ ಅವರು ಸಿಧು ' ದೇಶಕ್ಕೆ 'ಅಪಾಯಕಾರಿ' ಹಾಗೂ  'ದೇಶ ವಿರೋಧಿ' ಆಗಿದ್ದರಿಂದ ರಾಜ್ಯದ ಸಿಎಂ ಆಗಬಾರದು ಎಂದು ಹೇಳಿದ್ದರು.

"ಸಿಧು ಇಮ್ರಾನ್ ಖಾನ್ ಮತ್ತು ಜನರಲ್ ಬಾಜ್ವಾ ಅವರನ್ನು ಅಪ್ಪಿಕೊಳ್ಳುವುದನ್ನು ನಾವು ನೋಡಿದ್ದೇವೆ. ಕರ್ತಾರ್‌ಪುರ್ ಕಾರಿಡಾರ್ ತೆರೆಯುವ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿಯನ್ನು ಹಾಡಿಹಾಡಿರುವುದನ್ನು ನಾವು ನೋಡಿದ್ದೇವೆ. ನಮ್ಮ ಸೈನಿಕರು ಪ್ರತಿದಿನ ಗಡಿಯಲ್ಲಿ ಸಾಯುತ್ತಿದ್ದಾರೆ" ಎಂದು ಅಮರಿಂದರ್ ಹೇಳಿದ್ದರು.

ಈಗ  ಹರಿಯಾಣ ಗೃಹ ಸಚಿವ ಅನಿಲ್ ವಿಜ್ ,ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಹಾಗೂ  ಉತ್ತರಾಖಂಡದ ಪಕ್ಷದ ಸಂಸದ ಅನಿಲ್ ಬಲೂನಿ, ಎಲ್ಲರೂ ಅಮರೀಂದರ್ ಅವರ ಬಗ್ಗೆ ಮೃಧು ಧೋರಣೆ ತಾಳಿದ್ದು, ಅವರನ್ನು ಹೊಗಳಿದ್ದಾರೆ.  

 ಸೆಪ್ಟೆಂಬರ್ 18 ರಂದು ರಾಜೀನಾಮೆ ನೀಡಿದ ನಂತರ ನೀಡಿದ ಸಂದರ್ಶನಗಳಲ್ಲಿ ಸಿಂಗ್ ಬಿಜೆಪಿ ವಿರುದ್ಧ ಏನನ್ನೂ ಮಾತನಾಡಲಿಲ್ಲ. ಇದರೊಂದಿಗೆ, ಅಮರಿಂದರ್ ಅವರನ್ನು ಬಿಜೆಪಿ ಬಲವಾಗಿ ಸಮರ್ಥಿಸಿಕೊಂಡಿದ್ದು, ಮಾಜಿ ಸಿಎಂ ಬಿಜೆಪಿ ಪಕ್ಷಕ್ಕೆ ಸೇರುತ್ತಾರೆಯೇ ಎಂದು ರಾಜಕೀಯ ವಲಯದಲ್ಲಿ ಊಹಾಪೋಹಗಳನ್ನು ಹುಟ್ಟುಹಾಕಿದೆ.

ಗುರುವಾರ  ಅನಿಲ್ ವಿಜ್ ಅವರು ಅಮರೀಂದರ್ ಅವರನ್ನು '"ರಾಷ್ಟ್ರೀಯವಾದಿ' ಎಂದು ಹೊಗಳುತ್ತಾ, ಪಂಜಾಬ್ ಮತ್ತು ಪಾಕಿಸ್ತಾನವನ್ನು ಹತ್ತಿರವಾಗಿಸಲು ಕಾಂಗ್ರೆಸ್ 'ದೇಶವಿರೋಧಿ ಪಿತೂರಿ' ರೂಪಿಸಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News