ಮುಂದಿನ ವಾರ ಕಾಂಗ್ರೆಸ್ ಸೇರಲು ಕನ್ಹಯ್ಯಾ ಕುಮಾರ್, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಸಜ್ಜು

Update: 2021-09-25 13:08 GMT

ಹೊಸದಿಲ್ಲಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ ಕನ್ಹಯ್ಯ ಕುಮಾರ್ ಹಾಗೂ  ಗುಜರಾತ್ ನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಅವರು ಮುಂದಿನ ವಾರದ ಆರಂಭದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ  NDTV ವರದಿ ಮಾಡಿದೆ.

ಈ ಕಾರ್ಯಕ್ರಮವು ಮೂಲ ಯೋಜನೆಯಂತೆ ಭಗತ್ ಸಿಂಗ್ ಜನ್ಮದಿನವಾಗಿರುವ ಸೆಪ್ಟೆಂಬರ್ 28 ರಂದು ನಡೆಯುತ್ತದೆ ಎಂದು ಮೂಲಗಳು NDTV ಗೆ ತಿಳಿಸಿವೆ.

ಬಿಜೆಪಿ ಆಡಳಿತವಿರುವ ಗುಜರಾತ್ ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಈ ಬೆಳವಣಿಗೆ ನಡೆಯುತ್ತಿದೆ. ಮೇವಾನಿ 2017 ರಲ್ಲಿ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಚುನಾವಣೆಯಲ್ಲಿ ಗೆದ್ದಿದ್ದರು.

"ಸೆಪ್ಟೆಂಬರ್ 28 ರಂದು ನಾನು ಕನ್ಹಯ್ಯಾ ಕುಮಾರ್ ಜೊತೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರುತ್ತೇನೆ" ಎಂದು ಮೇವಾನಿ ಅವರು ಪಿಟಿಐಗೆ ತಿಳಿಸಿದರು. ಪಕ್ಷ ಸೇರಿದ ನಂತರವೇ ನಿರ್ಧಾರದ ಬಗ್ಗೆ ವಿವರವಾಗಿ ಮಾತನಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ದಿಲ್ಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದು, ಅಲ್ಲಿ ತಾನು ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರುವುದಾಗಿ ಮೇವಾನಿ ಹೇಳಿದರು.

"ದೇಶದ ಅಭಿವೃದ್ಧಿಗೆ ಶ್ರಮಿಸಲು ಹಾಗೂ  ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು (ಮಹಾತ್ಮ) ಗಾಂಧಿ, ಸರ್ದಾರ್ (ಪಟೇಲ್) ಹಾಗೂ  (ಜವಾಹರಲಾಲ್) ನೆಹರು ಅವರ ಆದರ್ಶಗಳನ್ನು ಬಲಪಡಿಸಲು ಸಿದ್ಧರಿರುವ ಎಲ್ಲಾ ಕ್ರಾಂತಿಕಾರಿ ಯುವಕರನ್ನು ನಾವು ಸ್ವಾಗತಿಸುತ್ತೇವೆ" ಎಂದು ಹಾರ್ದಿಕ್ ಪಟೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕುಮಾರ್ ಅವರು ಕಾಂಗ್ರೆಸ್‌ಗೆ ಸೇರುವಾಗ ಇತರ ಕೆಲವು ಎಡ ಪಕ್ಷದ ನಾಯಕರನ್ನು ಕರೆತರುವ ನಿರೀಕ್ಷೆಯಿದೆ.

ಕುಮಾರ್ 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ತವರು ಬಿಹಾರದ ಬೇಗುಸರಾಯಿಯಿಂದ ಸ್ಪರ್ಧಿಸಿದ್ದರೂ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು. ತಮ್ಮ ಭವಿಷ್ಯದ ಪಾತ್ರವನ್ನು ಚರ್ಚಿಸಲು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರನ್ನು ಅವರು  ಈಗಾಗಲೇ ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News