ಅಕ್ರಮ ಹಣ ಸಂಪಾದಿಸುವ ಪೊಲೀಸ್ ಅಧಿಕಾರಿಗಳನ್ನು ಜೈಲಿಗಟ್ಟಬೇಕಾಗಿದೆ: ಸುಪ್ರೀಂಕೋರ್ಟ್

Update: 2021-09-27 16:10 GMT

ಹೊಸದಿಲ್ಲಿ, ಸೆ.27: ಹಾಲಿ ಸರಕಾರ ಜೊತೆ ಸ್ನೇಹ ಬೆಳೆಸಿಕೊಂಡು, ಅಕ್ರಮವಾಗಿ ಹಣ ಸಂಪಾದಿಸುವ ಪೊಲೀಸ್ ಅಧಿಕಾರಿಗಳು ಆಡಳಿತ ಬದಲಾದಾಗ ಸೂಕ್ತ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.

ಇಂತಹ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ರಕ್ಷಣೆ ದೊರೆಯಬಾರದು ಹಾಗೂ ಅವರನ್ನು ಜೈಲಿಗೆ ತಳ್ಳಬೇಕಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ತಿಳಿಸಿದ್ದಾರೆ. ಸುಲಿಗೆ ಆರೋಪದಲ್ಲಿ ಬಂಧನ ಭೀತಿಯನ್ನು ಎದುರಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಅವರು ಮಧ್ಯಂತರ ಜಾಮೀನನ್ನು ನೀಡಿದ ಸಂದರ್ಭ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಹಾಗೂ ದೇಶದ್ರೋಹದ ಪ್ರಕರಣದಲ್ಲಿ ತನ್ನ ಬಂಧನದ ವಿರುದ್ಧ ಮಧ್ಯಂತರ ಕೋರಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಗುರುಜೀಂದರ್ ಪಾಲ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸಿಜೆಐ ರಮಣ ನೇತೃತ್ವದ ನ್ಯಾಯಪೀಠವು ಕೈಗೆತ್ತಿಕೊಂಡಿತ್ತು.

ಗುರುಜೀಂದರ್ ಸಿಂಗ್ ಅವರು ತನ್ನ ಬಂಧನದ ವಿರುದ್ಧ ಸುಪ್ರೀಂಕೋರ್ಟ್ನ ರಕ್ಷಣೆಯನ್ನು ಕೋರಿರುವುದು ಇದು ಮೂರನೆ ಸಲವಾಗಿದೆ. ಈ ಹಿಂದಿನ ಎರಡು ಪ್ರಕರಣಗಳಲ್ಲಿಯೂ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.

‘‘ಪ್ರತಿಯೊಂದು ಪ್ರಕರಣದಲ್ಲಿಯೂ ನಿಮಗೆ ರಕ್ಷಣೆ ದೊರೆಯಲು ಸಾಧ್ಯವಿಲ್ಲ. ನೀವು ಸರಕಾರಕ್ಕೆ ನಿಕಟವಾಗಿದ್ದುದರಿಂದ ನೀವು ಹಣ ಪಡೆಯಲು ಆರಂಭಿಸಿದ್ದೀರಿ. ಸರಕಾರಕ್ಕೆ ನಿಕಟವಾಗಿದ್ದರೆ ಹೀಗೆಲ್ಲಾ ಆಗುತ್ತದೆ. ಆದರೆ ಒಂದಲ್ಲ ಒಂದು ದಿನ ಅದರ ಪ್ರತಿಫಲವನ್ನು ಉಣ್ಣಬೇಕಾಗುತ್ತದೆ’’ ಎಂದು ಮುಖ್ಯ ನ್ಯಾಯಮೂರ್ತಿ ರಮಣ ತಿಳಿಸಿದರು.

‘‘ನೀವು ಸರಕಾರದ ಜೊತೆ ಚೆನ್ನಾಗಿದ್ದಲ್ಲಿ ನೀವು ಹಣವನ್ನು ಕೀಳಬಹುದು. ಆದರೆ ಅದನ್ನು ನೀವು ಒಂದಲ್ಲ ಒಂದು ದಿನ ಬಡ್ಡಿ ಸಮೇತ ಮರುಪಾವತಿಸಬೇಕಾಗುತ್ತದೆ. ಇದು ತುಂಬಾ ಅತಿಯಾಯಿತು. ಇಂತಹ ಅಧಿಕಾರಿಗಳಿಗೆ ನಾವು ಯಾಕೆ ರಕ್ಷಣೆ ನೀಡಬೇಕು? ದೇಶದಲ್ಲಿ ಇದೊಂದು ಹೊಸ ಪ್ರವೃತ್ತಿಯಾಗಿದೆ ಎಂದವರು ತಿಳಿಸಿದರು.

ಆದರೆ ಸಿಂಗ್ ಅವರ ವಕೀಲರು ಗುರುಜೀಂದರ್ ಪಾಲ್ ಸಿಂಗ್ ರಂತಹ ಅಧಿಕಾರಿಗಳಿಗೆ ರಕ್ಷಣೆ ದೊರೆಯಬೇಕಾದ ಅಗತ್ಯವಿದೆ ಆಗ ಅದನ್ನು ಒಪ್ಪದ ನ್ಯಾಯಾಲಯ ಇಲ್ಲ, ಅವರು ಜೈಲಿಗೆ ಹೋಗಲೇ ಬೇಕು ಎಂದಿತು.

ಆದಾಗ್ಯೂ ಮುಖ್ಯ ನ್ಯಾಯಮೂರ್ತಿ ರಮಣ ಅವರು ಸಿಂಗ್ ಗೆ ಮಧ್ಯಂತರ ರಕ್ಷಣೆ ನೀಡಿದರು ಹಾಗೂ ಚತ್ತೀಸ್ಗಢ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

ಗುರುಜೀಂದರ್ ಅಪಾರ ಪ್ರಮಾಣದ ಅಕ್ರಮ ಸಂಪತ್ತುಗಳನ್ನು ಕೂಡಿಹಾಕಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದ ಬಳಿಕ ಚತ್ತೀಸ್ಗಢದ ಭ್ರಷ್ಟಾಚಾರ ನಿಗ್ರಹ ದಳವು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿತ್ತು. ಪ್ರಕರಣದ ಮುಂದಿನ ವಿಚಾರಣೆ ಆಕ್ಟೋಬರ್ 1ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News