×
Ad

ಹೆರಾಯಿನ್‌ ಕಳ್ಳಸಾಗಾಟದಲ್ಲಿ ಅದಾನಿ ಬಂದರು ಆಡಳಿತ ಲಾಭ ಗಳಿಸಿದೆಯೇ? ಎಂದು ತನಿಖೆ ನಡೆಸಲು ಕೋರ್ಟ್‌ ಸೂಚನೆ

Update: 2021-09-29 14:16 IST

ಅಹ್ಮದಾಬಾದ್: ಗುಜರಾತ್ ನಾರ್ಕಾಟಿಕ್ ಡ್ರಗ್ಸ್ ಎಂಡ್ ಸೈಕೋಟ್ರೋಪಿಕ್ ಸಬ್ಸೆಸ್ಟೆನ್ಸಸ್ ವಿಶೇಷ ನ್ಯಾಯಾಲಯವೊಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ಗೆ  ಆದೇಶವೊಂದನ್ನು ನೀಡಿ ಇತ್ತೀಚೆಗೆ ಡಿಆರ್‌ಐ ಮುಂದ್ರಾ ಅದಾನಿ ಬಂದರಿನಲ್ಲಿ ವಶಪಡಿಸಿಕೊಂಡ 2,990 ಕೆಜಿ ಹೆರಾಯಿನ್‍ಗೆ ಸಂಬಂಧಿಸಿದಂತೆ ಪ್ರಶ್ನಿಸಿ ಈ ಹೆರಾಯಿನ್ ಆಮದಿನಿಂದ ಬಂದರು, ಅದರ ಆಡಳಿತ ಅಥವಾ ಪ್ರಾಧಿಕಾರ ಯಾವುದಾದರೂ ಲಾಭ ಗಳಿಸಿದೆಯೇ ಎಂದು ತನಿಖೆ ನಡೆಸುವಂತೆ ಸೂಚಿಸಿದೆ.

ಸೆಪ್ಟೆಂಬರ್ 16ರಂದು ಎರಡು ಕಂಟೇನರ್‍ಗಳಲ್ಲಿ ಅಫ್ಗಾನಿಸ್ತಾನದಿಂದ ಇರಾನ್ ಮೂಲಕ ಮುಂದ್ರಾ ಬಂದರಿಗೆ  ಆಂಧ್ರ ಪ್ರದೇಶದ ವಿಜಯವಾಡದ ಆಶಿ ಟ್ರೇಡಿಂಗ್ ಕಂಪೆನಿ ಹೆಸರಿನಲ್ಲಿ ಈ ಸರಕು ಆಗಮಿಸಿತ್ತು.

ಪ್ರಕರಣದ ಪ್ರಮುಖ ಆರೋಪಿ, ಕೊಯಂಬತ್ತೂರು ನಿವಾಸಿ ರಾಜಕುಮಾರ್ ಪಿ ಎಂಬಾತನ ರಿಮಾಂಡ್ ಅಪ್ಲಿಕೇಶನ್ ವಿಚಾರಣೆ ಸಂದರ್ಭ  ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಿ ಎಂ ಪವಾರ್ ಮೇಲಿನ ಸೂಚನೆ ನೀಡಿದ್ದಾರೆ.

ಇಷ್ಟೊಂದು ದೊಡ್ಡ ಪ್ರಮಾಣದ ನಿಷೇಧಿತ ಹೆರಾಯಿನ್ ಸರಕು ಬಂದರಿಗೆ ಆಗಮಿಸಿರುವುದು ಅಲ್ಲಿನ ಆಡಳಿತ ಹಾಗು ಅಧಿಕಾರಿಗಳಿಗೆ ಹೇಗೆ ತಿಳಿದಿರಲಿಲ್ಲ ಎಂದೂ  ನ್ಯಾಯಾಧೀಶರು ಪ್ರಶ್ನಿಸಿದರಲ್ಲದೆ  ಆಂಧ್ರ ಪ್ರದೇಶದ ವಿಜಯವಾಡಕ್ಕೆ ಹತ್ತಿರದಲ್ಲಿ ಚೆನ್ನೈ ಬಂದರು ಸಹಿತ ಹಲವು ಬಂದರುಗಳಿದ್ದರೂ ದೂರದ ಗುಜರಾತ್‍ನ ಮುಂದ್ರಾ ಅದಾನಿ ಬಂದರಿಗೆ ಈ ಸರಕು ಏಕೆ ಬಂದಿದೆ ಎಂದ ಪ್ರಶ್ನಿಸಿದ್ದಾರೆ.

ಟಾಲ್ಕ್ ಕಂಟೇನರ್ ಅನ್ನು ವಿಜಯವಾಡದ ಆಶಿ ಟ್ರೇಡಿಂಗ್ ಕಂಪೆನಿಯು ಆಮದುಗೊಳಿಸಿತ್ತು. ಈ ಪ್ರಕರಣ ಸಂಬಂಧ ಆಶಿ ಟ್ರೇಡಿಂಗ್ ಸಂಸ್ಥೆಯ  ಮಾಲೀಕರ ಸಹಿತ ಎಂಟು ಮಂದಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News