ಅಸ್ಸಾಂ: ಗೋರುಖುಟಿ ತೆರವು ಕಾರ್ಯಾಚರಣೆ ವೇಳೆ ಮಾನವ ಹಕ್ಕುಗಳ ಉಲ್ಲಂಘನೆ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದ ಆಯೋಗ
Update: 2021-10-01 16:20 IST
ಗುವಹಾಟಿ: ಇತ್ತೀಚೆಗೆ ದರ್ರಂಗ್ ಜಿಲ್ಲೆಯ ಗೋರುಖುಟಿ ಎಂಬಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ಬಂಗಾಳಿ ಮುಸ್ಲಿಮರ ಹಲವು ಕುಟುಂಬಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಮಾನವ ಹಕ್ಕುಗಳು ಉಲ್ಲಂಘನೆಯಾಗಿವೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಅಸ್ಸಾಂ ಮಾನವ ಹಕ್ಕುಗಳ ಆಯೋಗ ಹೇಳಿದೆ.
ಘಟನೆ ಬಗ್ಗೆ ತನಿಖೆ ನಡೆಸಲು ತನಿಖಾ ಆಯೋಗವನ್ನು ರಚಿಸಲಾಗಿದೆಯೇ ಎಂದು ಆಯೋಗ ರಾಜ್ಯದ ಗೃಹ ಇಲಾಖೆಯನ್ನು ಕೇಳಿದೆ.
ವಿಪಕ್ಷ ನಾಯಕ ದೇಬಬ್ರತ ಸೈಕಿಯಾ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿ ಗುರುವಾರ ಆಯೋಗವು ಆದೇಶ ಹೊರಡಿಸಿದೆ.
ತಾನು ಕೈಗೊಂಡ ಕ್ರಮಗಳ ಬಗ್ಗೆ 21 ದಿನಗಳೊಳಗೆ ಮಾಹಿತಿ ನೀಡುವಂತೆ ಆಯೋಗವು ಗೃಹ ಇಲಾಖೆಗೆ ಸೂಚಿಸಿದೆಯಲ್ಲದೆ ಆ ಉತ್ತರದ ಆಧಾರದಲ್ಲಿ ಮುಂದಿನ ಕ್ರಮದ ಕುರಿತು ನಿರ್ಧರಿಸುವುದಾಗಿ ತಿಳಿಸಿದೆ.