ಮಂಡಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ನಟಿ ಕಂಗನಾ ರಾಣಾವತ್

Update: 2021-10-03 04:40 GMT
ಕಂಗನಾ ರಾಣಾವತ್ (ಫೋಟೊ- PTI)

ಶಿಮ್ಲಾ : ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯ ಸಂಬಂಧ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿದ್ದು, ಬಾಲಿವುಡ್ ನಟಿ ಕಂಗನಾ ರಾಣಾವತ್, ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ರಾಮಸ್ವರೂಪ್ ಶರ್ಮಾ ಕಳೆದ ಮಾರ್ಚ್‌ನಲ್ಲಿ ನಿಧನರಾಗಿದ್ದರಿಂದ ಈ ಕ್ಷೇತ್ರ ತೆರವಾಗಿದೆ.

ಅಕ್ಟೋಬರ್ 30ರಂದು ನಡೆಯುವ ಉಪ ಚುನಾವಣೆ ಸಂಬಂಧ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ರಾಜ್ಯ ಚುನಾವಣಾ ಸಮಿತಿ ಧರ್ಮಶಾಲೆಯಲ್ಲಿ ಶೀಘ್ರವೇ ಸಭೆ ಸೇರಲಿದೆ. ಫತೇಪುರ, ಜುಬ್ಬಲ್ ಕೊತಾಯ್ ಮತ್ತು ಅರ್ಕಿ ವಿಧಾನಸಭಾ ಸ್ಥಾನಗಳಿಗೂ ಅಂದು ಚುನಾವಣೆ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಜುಲೈ 8ರಂದು ನಿಧನರಾದ ಹಿನ್ನೆಲೆಯಲ್ಲಿ ಅರ್ಕಿ ಕ್ಷೇತ್ರ, ನರೇಂದ್ರ ಬ್ರಾತ್ಗಾ ಜೂನ್‌ನಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಜುಬ್ಬಲ್ ಕೊತಾಯ್ ಹಾಗೂ ಮಾಜಿ ಸಚಿವ ಸುಜನ್ ಸಿಂಗ್ ಪಥಾನಿಯಾ ಮೃತಪಟ್ಟ ಹಿನ್ನೆಲೆಯಲ್ಲಿ ಫತೇಪುರ ಕ್ಷೇತ್ರಗಳು ತೆರವಾಗಿದ್ದವು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಕಂಗಾನಾ ಬಹಿರಂಗವಾಗಿ ಘೋಷಿಸಿಲ್ಲವಾದರೂ, ಸಂಭಾವ್ಯ ಉಮೇದುವಾರಿಕೆ ಬಗ್ಗೆ ಬಿಜೆಪಿಯ ಉನ್ನತ ಮುಖಂಡರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪಕ್ಷದ ಒಂದು ವರ್ಗ ಕಂಗಾನಾಗೆ ಟಿಕೆಟ್ ನೀಡುವುದನ್ನು ವಿರೋಧಿಸುತ್ತಿದೆ ಎನ್ನಲಾಗಿದೆ.

ಕಂಗನಾ ಮಂಡಿ ಜಿಲ್ಲೆಯ ಭಾಮ್ಲಾ ಗ್ರಾಮ ಮೂಲದವರು. ಮಂಡಿ ಕ್ಷೇತ್ರ ವ್ಯಾಪ್ತಿಯ ಮನಾಲಿಯಲ್ಲಿ ಕಂಗನಾ ಹೊಸ ಮನೆಯನ್ನು ಕೂಡಾ ಕಟ್ಟಿಸಿದ್ದಾರೆ.

ಏಳು ಈಶಾನ್ಯ ರಾಜ್ಯಗಳ ಉಸ್ತುವಾರಿ ಹೊಂದಿರುವ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅಜಯ್ ಅವರ ತಮ್ಮ ಪಂಕಜ್ ಜಮಾಲ್, ಮುಖ್ಯಮಂತ್ರಿ ಜೈರಾಂ ಠಾಕೂರ್ ಅವರ ನಿಕಟವರ್ತಿ ಹಾಗೂ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ನಿಹಾಲ್ ಚಂದ್ ಕೂಡಾ ರೇಸ್‌ನಲ್ಲಿದ್ದಾರೆ. ಕಾರ್ಗಿಲ್ ಯುದ್ಧ ಹೀರೊ ಬ್ರಿಗೇಡಿಯರ್ ಕುಶಾಲ್ ಠಾಕೂರ್ ಕೂಡಾ ಮಂಡಿ ಕ್ಷೇತ್ರದಿಂದ ಕಣಕ್ಕೆ ಇಳಿಯಲು ದೀರ್ಘಕಾಲದಿಂದ ಲಾಬಿ ಮಾಡುತ್ತಿದ್ದಾರೆ. 2017ರಲ್ಲೇ ಅವರು ಸ್ಪರ್ಧಿಸಲು ಬಯಸಿದ್ದರು. ಆದರೆ ಪಕ್ಷ ಹಾಲಿ ಸಂಸದ ರಾಮಸ್ವರೂಪ್ ಶರ್ಮಾ ಅವರಿಗೇ ಟಿಕೆಟ್ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News