ಶಾಸಕರ ನಿಧಿ ಸದ್ಬಳಕೆಯಾಗಲಿ

Update: 2021-10-04 04:55 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದ ಶಾಸಕರಿಗೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಸರಕಾರ ಪ್ರತಿ ವರ್ಷ ನೀಡುವ ತಲಾ 2 ಕೋಟಿ ರೂಪಾಯಿ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಉಭಯ ಸದನಗಳ ಸದಸ್ಯರಿಗೆ ನೀಡುವಂತೆ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರಿಗೂ ಪ್ರದೇಶಾಭಿವೃದ್ಧಿ ಅನುದಾನ ನೀಡುತ್ತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಚುನಾಯಿತ ಪ್ರತಿನಿಧಿಗಳಿಗೆ ಇಂಥ ವಿಶೇಷ ನಿಧಿ ನೀಡುವ ಔಚಿತ್ಯದ ಬಗ್ಗೆ ಹಿಂದಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ಪ್ರಶ್ನಿಸಿದ್ದರು. ಆದರೆ ಅವರ ಪ್ರಶ್ನೆ ಅಲ್ಲೇ ಉಳಿದು ಈ ಅನುದಾನ ಮುಂದುವರಿದಿದೆ. ಕೊರೋನ ಬಂದ ನಂತರ ಈ ಅನುದಾನ ಪಿಎಂ ಕೇರ್ಸ್ ಉಡಿಗೆ ಹೋಗಿ ಬೀಳುತ್ತಿರುವುದು ಎಲ್ಲರೂ ತಿಳಿದ ಸಂಗತಿಯಾಗಿದೆ.

ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಶಾಸಕರಿಗೆ ಪತ್ರವೊಂದನ್ನು ಬರೆದು ಸಕಾಲದಲ್ಲಿ ಈ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಹೀಗೆ ಅನುದಾನವನ್ನು ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳದಿದ್ದರೆ ರಾಜ್ಯದ ಪ್ರಗತಿಗೆ ಪೆಟ್ಟು ಬೀಳುತ್ತದೆ ಎಂಬ ಮುಖ್ಯಮಂತ್ರಿ ಅವರು ಕಳವಳ ಸೂಕ್ತವಾಗಿದೆ. ಶಾಸಕರಿಗೆ 2021-_22ನೇ ವರ್ಷದಲ್ಲಿ ಎರಡು ಸಮಾನ ಕಂತುಗಳಲ್ಲಿ ತಲಾ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ.

ಆದರೆ ಈ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದಿರುವುದು ಆತಂಕದ ಸಂಗತಿಯಾಗಿದೆ. ಈ ವರ್ಷದ ಜುಲೈ ಅಂತ್ಯದ ವೇಳೆಗೆ ಸರಾಸರಿ ಶೇ. 17.21ರಷ್ಟು ಅನುದಾನವನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಇದು ರಾಜ್ಯದ ಅಭಿವೃದ್ಧಿಯ ಬಗ್ಗೆ ನಮ್ಮ ಶಾಸಕರು ಎಷ್ಟು ಆಸಕ್ತಿ ಹೊಂದಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿದೆ.

ಕೋವಿಡ್ ಸಾಂಕ್ರಾಮಿಕದ ಎರಡು ಅಲೆಗಳ ಹೊಡೆತಕ್ಕೆ ಸಿಕ್ಕು ರಾಜ್ಯದ ಆರ್ಥಿಕತೆ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಇಂದಿನ ದಿನಗಳಲ್ಲಿ ಈ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಸದ್ಬಳಕೆಯಾಗಿ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಸಿದರೆ ಜನಸಾಮಾನ್ಯರು ನೆಮ್ಮದಿಯಿಂದ ಉಸಿರಾಡಬಹುದು. ಆದರೆ ನಮ್ಮ ಶಾಸಕರ ಹೊಣೆಗೇಡಿತನದಿಂದಾಗಿ ಕೆಲಸ ಆಗುತ್ತಿಲ್ಲ. ವಿಶೇಷವಾಗಿ ಶಾಸಕರ ಈ ಪ್ರದೇಶಾಭಿವೃದ್ಧಿ ಅನುದಾನ ಹಿಂದುಳಿದ ಜಿಲ್ಲೆಗಳಾದ ಕಲಬುರಗಿ, ಚಿತ್ರದುರ್ಗ, ವಿಜಯಪುರ, ಬಳ್ಳಾರಿ ಮತ್ತು ಕೊಪ್ಪಳ ಈ ಐದು ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗಿರುವುದು ಕಳವಳಪಡಬೇಕಾದ ಸಂಗತಿಯಾಗಿದೆ. ತಮ್ಮ ಭಾಗದ ಬಗ್ಗೆ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅಗಾಗ ಗೊಣಗಾಡುವ ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಮೊದಲು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗಿರುವುದು ಚಿತ್ರದುರ್ಗ ಜಿಲ್ಲೆಯಲ್ಲಿ. ಮಂತ್ರಿಯಾಗಲು ಪೈಪೋಟಿ ಮಾಡುವ ಈ ಜಿಲ್ಲೆಯ ಶಾಸಕರು ತಮ್ಮ ಪ್ರದೇಶದ ಅಭಿವೃದ್ಧಿ ಗಾಗಿ ಇರುವ ನಿಧಿಯನ್ನು ಬಳಸಿಕೊಂಡಿರುವುದು ಶೇ. 2.25 ರಷ್ಟು ಮಾತ್ರ. ನಂತರ ಬಳಕೆಯಾಗಿರುವುದು ಅನುಕ್ರಮವಾಗಿ ಕಲಬುರಗಿ (ಶೇ.7.15), ವಿಜಯಪುರ (ಶೇ.8.98), ಬಳ್ಳಾರಿ (ಶೇ.10.25) ಮತ್ತು ಕೊಪ್ಪಳ (ಶೇ.11.63). ಈ ಜಿಲ್ಲೆಗಳು ಹಿಂದುಳಿಯಲು ರಾಜ್ಯ ಸರಕಾರದ ನಿರ್ಲಕ್ಷ ಮಾತ್ರ ಕಾರಣವಲ್ಲ, ಈ ಜಿಲ್ಲೆಗಳ ಶಾಸಕರ ಬೇಜವಾಬ್ದಾರಿತನವೂ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಅಂತಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿರುವುದು ಸರಿಯಾಗಿದೆ.

  ಶಾಸಕರಿಗೆ ನೀಡಲಾಗುವ ಪ್ರದೇಶಾಭಿವೃದ್ಧಿ ಅನುದಾನವನ್ನು ಗ್ರಾಮೀಣ ರಸ್ತೆ, ಸಮುದಾಯ ಭವನ ಮತ್ತು ದೇವಾಲಯ ನಿರ್ಮಾಣ, ಚರಂಡಿ ದುರಸ್ತಿ, ಕುಡಿಯುವ ನೀರು ಪೂರೈಕೆ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಶಾಲೆ, ಕಾಲೇಜು, ಗ್ರಂಥಾಲಯ, ಬಸ್ ನಿಲ್ದಾಣ, ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯ ಹೀಗೆ ವಿವಿಧ ಜನೋಪಯೋಗಿ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಈ ನಿಧಿ ದುರ್ವಯವಾಗದಂತೆ ತಡೆಯಲು ಇದು ನೇರವಾಗಿ ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗೆ ಜಮಾ ಆಗುವಂತೆ ಕ್ರಮ ವಹಿಸಲಾಗಿದೆ. ಶಾಸಕರು ಶಿಫಾರಸು ಮಾಡುವ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಇದನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ಈ ವರ್ಷ ಕೋವಿಡ್ ಕಾರಣದಿಂದ ಈ ಅನುದಾನ ಬಿಡುಗಡೆಯಾಗುವಲ್ಲಿ ವಿಳಂಬವಾಗಿದೆ ಎಂಬುದು ಕೂಡ ಸುಳ್ಳಲ್ಲ.

 ಮುಖ್ಯಮಂತ್ರಿ ಬೊಮ್ಮಾಯಿಯವರ ಪತ್ರದ ಪ್ರಕಾರ ಕೋವಿಡ್‌ನಿಂದ ಏನೇ ತೊಂದರೆಯಾಗಿದ್ದರೂ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 938.15 ಕೋಟಿ ರೂಪಾಯಿ ಅನುದಾನ ಈಗಲೂ ಲಭ್ಯವಿದೆ. ಶಾಸಕರು ಎಲ್ಲದಕ್ಕೂ ಸರಕಾರದ ವಿರುದ್ಧ ಗೊಣಗಾಡದೆ ಕುಂಟು ನೆಪ ಹೇಳದೆ ಲಭ್ಯವಿರುವ ಅನುದಾನದ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಅದಕ್ಕೆ ಶಾಸಕರೇ ಹೊಣೆಯಾಗಬೇಕಾಗುತ್ತದೆ.

ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಸದ್ಬಳಕೆಯ ಬಗ್ಗೆ ಚುನಾಯಿತ ಪ್ರತಿನಿಧಿಗಳು ನಿರ್ಲಕ್ಷ ಧೋರಣೆ ತಾಳಿದರೆ ಈ ನಿಧಿಯ ಬಿಡುಗಡೆಯನ್ನು ಸರಕಾರ ಸ್ಥಗಿತಗೊಳಿಸಬಹುದು. ಆವಾಗ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಹಾಗಾಗದಂತೆ ಶಾಸಕರು ಎಚ್ಚರ ವಹಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News