ಫೇಸ್ಬುಕ್‌ ಸರ್ವರ್‌ ಡೌನ್:‌ ಕೆಲವೇ ಗಂಟೆಗಳಲ್ಲಿ 6 ಬಿಲಿಯನ್ ಡಾಲರ್ ಗೂ ಹೆಚ್ಚು ಮೊತ್ತ ಕಳಕೊಂಡ ಝುಕರ್ಬರ್ಗ್

Update: 2021-10-05 08:00 GMT

ಹೊಸದಿಲ್ಲಿ: ಸೋಮವಾರ ತಾಂತ್ರಿಕ ದೋಷಗಳಿಂದ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಸಹಿತ ಟ್ವಿಟ್ಟರ್, ಇನ್‍ಸ್ಟಾಗ್ರಾಂ ಹಲವು ಗಂಟೆಗಳ ಕಾಲ ಸ್ಥಗಿತಗೊಂಡ ಬೆಳವಣಿಗೆಯ ನಡುವೆಯೇ ಫೇಸ್‍ಬುಕ್ ಇಂಕ್‍ನ  ಷೇರು ಬೆಲೆ ಕೂಡ ಶೇ4.9ರಷ್ಟು ಇಳಿಕೆ ಕಂಡ ಪರಿಣಾಮ ಫೇಸ್‍ಬುಕ್ ಸ್ಥಾಪಕ ಮಾರ್ಕ್ ಝುರ್ಕೆಬರ್ಗ್ ಕೆಲವೇ ಗಂಟೆಗಳ ಅವಧಿಯಲ್ಲಿ 6 ಬಿಲಿಯನ್ ಡಾಲರ್  ಕಳಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಫೇಸ್ ಬುಕ್ ಷೇರುಗಳ ಬೆಲೆಗಳ ನಿನ್ನೆಯ ಕುಸಿತದೊಂದಿಗೆ ಸೆಪ್ಟೆಂಬರ್ ಮಧ್ಯಭಾಗದಿಂದ ಒಟ್ಟು ಶೇ15ರಷ್ಟು ಕುಸಿತ ಕಂಡಿದೆ. ಸೋಮವಾರ ಝುರ್ಕೆಬರ್ಗ್ ಅವರ ಒಟ್ಟು ಸಂಪತ್ತಿನ ಮೌಲ್ಯ 121.6 ಬಿಲಿಯನ್ ಡಾಲರ್ ಆಗಿದ್ದು ಬ್ಲೂಂಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಅವರು ಬಿಲ್ ಗೇಟ್ಸ್ ಗಿಂತಲೂ ಕೆಳಗಿನ  ಸ್ಥಾನದಲ್ಲಿ ನಂ.5ನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ 140 ಬಿಲಿಯನ್ ಡಾಲರ್ ಆಗಿದ್ದ ಝುರ್ಕೆಬರ್ಗ್ ಅವರ ಸಂಪತ್ತು ಕೆಲವೇ ವಾರಗಳ ಅವಧಿಯಲ್ಲಿ 121.6  ಬಿಲಿಯನ್ ಡಾಲರ್‍ಗೆ ಕುಸಿದಿದೆ.

ಸೆಪ್ಟೆಂಬರ್ 13ರಿಂದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯು  ಫೇಸ್‍ಬುಕ್ ಆಂತರಿಕ ವರದಿಗಳನ್ನಾಧರಿಸಿ ಹಲವು ವರದಿಗಳನ್ನು ಪ್ರಕಟಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. ಫೇಸ್‍ಬುಕ್‍ಗೆ ತನ್ನ ಹಲವು ಉತ್ಪನ್ನಗಳಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿದಿತ್ತು, ಇನ್‍ಸ್ಟಾಗ್ರಾಂ ಹದಿಹರೆಯದ ಬಾಲಕಿಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಹಾಗೂ ಜನವರಿ 6ರ ಕ್ಯಾಪಿಟೊಲ್ ಹಿಂಸಾಚಾರದ ಕುರಿತು ತಪ್ಪು ಮಾಹಿತಿ ಹರಡಲಾಗಿತ್ತು ಎಂಬಿತ್ಯಾದಿ ವಿಚಾರಗಳು ಈ ವರದಿಗಳಲ್ಲಿದ್ದವು. ಈ ವರದಿಗಳನ್ನು ಬರೆದಾಕೆ ಸೋಮವಾರ ತನ್ನ ಗುರುತನ್ನು ಬಹಿರಂಗಪಡಿಸಿದ್ದರು.

ತನ್ನ ಉತ್ಪನ್ನಗಳು ಎದುರಿಸುತ್ತಿರುವ ಸಮಸ್ಯೆಗಳು ಕ್ಲಿಷ್ಟವಾಗಿವೆ ಹಾಗೂ ತಂತ್ರಜ್ಞಾನವೊಂದರಿಂದಲೇ ಆಗಿಲ್ಲ ಎಂದು ಫೇಸ್‍ಬುಕ್ ನಂತರ ಪ್ರತಿಕ್ರಿಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News