ನಾನೀಗಲೂ ಸಿಎಂ ಕುರ್ಚಿಯಲ್ಲಿದ್ದೇನೆಂದು ಅನಿಸುತ್ತಿದೆ: ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್

Update: 2021-10-13 07:12 GMT
ದೇವೇಂದ್ರ ಫಡ್ನವೀಸ್ (File Photo)

ಮುಂಬೈ: “ನಾನು  ರಾಜ್ಯದ ಮುಖ್ಯಮಂತ್ರಿ ಅಲ್ಲ ಎಂದು ನನಗೆ ಯಾವತ್ತೂ ಅನಿಸಿಲ್ಲ. ಈಗಲೂ ನಾನು ಈ ಹುದ್ದೆಯಲ್ಲಿದ್ದೇನೆಂದು ಅಂದುಕೊಂಡಿದ್ದೇನೆ. ನನ್ನನ್ನು ಸದಾ ಬೆಂಬಲಿಸುತ್ತಿರುವ ನಾಯಕರಾದ ಮಂದ ಮ್ಹಾತ್ರೆ, ಗಣೇಶ್ ನಾಯ್ಕ್, ನರೇಂದ್ರ ಪಾಟೀಲ್ ಇದಕ್ಕೆ ಕಾರಣ, ನಾನು ಹುದ್ದೆಯಲ್ಲಿಲ್ಲವೆಂದು ಅನಿಸುವುದೇ ಇಲ್ಲ. ನಾನೀಗ ಸಿಎಂ ಅಲ್ಲವೆಂದು ಅನಿಸಲು ಮಹಾರಾಷ್ಟ್ರ ಜನರು ಕೂಡ ನನಗೆ ಬಿಡಲಿಲ್ಲ. ನನಗೆ  ಆಶೀರ್ವಾದ ದೊರೆತಾಗ (ಮುಖ್ಯಮಂತ್ರಿಯಾಗಲು), ನಾನು ಮೊದಲು ಗೋವರ್ಧನಿ ದೇವಿ (ನವಿ ಮುಂಬೈ ದೇವತೆ) ಬಳಿ ಬಂದು ಆಶೀರ್ವಾದ ಕೋರುತ್ತೇನೆ,'' ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್  ಸುದ್ದಿಯಾಗಿದ್ದಾರಲ್ಲದೆ ವಿಪಕ್ಷಗಳಿಂದ ಟೀಕೆಗೂ ಗುರಿಯಾಗಿದ್ದಾರೆ.

“ಕಳೆದೆರಡು ವರ್ಷಗಳಿಂದ ಅವಿರತವಾಗಿ ಜನರಿಗಾಗಿ ಶ್ರಮಿಸುತ್ತಿದ್ದೇನೆ. ವಿಪಕ್ಷ ನಾಯಕನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ,'' ಎಂದೂ ಫಡ್ನವೀಸ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಸಚಿನ್ ಸಾವಂತ್, “ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರಕಾರದ ರಚನೆಯು ಫಡ್ನವೀಸ್ ಅವರಿಗೆ ಅನಿರೀಕ್ಷಿತವಾಗಿತ್ತು. ಆಗ ಉಂಟಾಗಿರುವ ಮಾನಸಿಕ ಆಘಾತದಿಂದ ಇಂತಹ ಮಾನಸಿಕ ಚಿಹ್ನೆಗಳು ಕಾಣಿಸಿಕೊಂಡಿರಬಹುದು. ಕೆಲವೊಮ್ಮೆ ರಕ್ತದಲ್ಲಿನ ಉಪ್ಪಿನಂಶ ಇಳಿಕೆಯೂ ಇಂತಹ ಭ್ರಮೆಗೆ ಕಾರಣವಾಗಬಹುದು. ಫಡ್ನವೀಸ್ ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಹಾಗೂ ಮಹಾರಾಷ್ಟ್ರದ ಜನರಿಗೆ ಅವರು ವಿಪಕ್ಷ ನಾಯಕರಾಗಿಬೇಕು,'' ಎಂದು ಹೇಳಿದ್ದಾರೆ.

ಫಡ್ನವೀಸ್ ಅವರು ಹಗಲು ಕನಸು ಕಾಣುವುದನ್ನು ನಿಲ್ಲಿಸಿ ತಾವು ವಿಪಕ್ಷ ನಾಯಕರೆಂಬ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಇನ್ನೊಬ್ಬ ಕಾಂಗ್ರೆಸ್ ವಕ್ತಾರ ಅತುಲ್ ಲೊಂಢೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News