ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದವರು ಎಲ್ಲಿದ್ದರೂ ಪತ್ತೆಹಚ್ಚಿ ಶಿಕ್ಷಿಸಲಾಗುವುದು: ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ

Update: 2021-10-15 09:59 GMT

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದು ದೇವಾಲಯಗಳು ಹಾಗೂ ದುರ್ಗಾ ಪೂಜೆ ಆಚರಣೆ ವೇಳೆ ನಡೆದ ದಾಳಿಗಳ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಬಾಂಗ್ಲಾದೇಶ ಸರಕಾರ ನೀಡಿದೆ.

ದುರ್ಗಾ ಪೂಜೆ ಆಚರಣೆ ವೇಳೆ ದೇಶದಲ್ಲಿ ಕೆಲ ಹಿಂದು ದೇವಾಲಯಗಳ ಮೇಲೆ ನಡೆದ ದಾಳಿಯ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ನಾಲ್ಕು ಮಂದಿ ಮೃತಪಟ್ಟ ನಂತರ ಪ್ರಧಾನಿ ಶೇಕ್ ಹಸೀನಾ ಅವರು 22 ಜಿಲ್ಲೆಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲು ಕ್ರಮಕೈಗೊಂಡಿದ್ದರು.

ಮುಸ್ಲಿಂ ಜನಸಂಖ್ಯೆ ಅಧಿಕವಾಗಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪಗಳ ನಡುವೆ ಅಲ್ಲಿನ ಸರಕಾರದಿಂದ ಮೇಲಿನ ಭರವಸೆ ಬಂದಿದೆ.

"ಕೊಮಿಲ್ಲಾದಲ್ಲಿನ ಘಟನೆಗಳನ್ನು ತನಿಖೆ ನಡೆಸಲಾಗುವುದು. ಯಾರನ್ನೂ ಬಿಟ್ಟುಬಿಡುವ ಪ್ರಶ್ನೆಯಿಲ್ಲ, ಅವರು ಯಾವುದೇ ಧರ್ಮದವರಾಗಿದ್ದರೂ ಸಹ. ಅವರನ್ನು ಪತ್ತೆಹಚ್ಚಿ ಶಿಕ್ಷಿಸಲಾಗುವುದು" ಎಂದು ಢಾಕಾದ ಧಾಕೇಶ್ವರಿ ದೇವಸ್ಥಾನದಲ್ಲಿ ಹಿಂದು ಸಮುದಾಯದವರೊಂದಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ನಂತರ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

"ಘಟನೆ ಕುರಿತು ಸಾಕಷ್ಟು ಮಾಹಿತಿಯಿದೆ. ಈ ತಂತ್ರಜ್ಞಾನ ಯುಗದಲ್ಲಿ ತಪ್ಪಿತಸ್ಥರನ್ನು ತಂತ್ರಜ್ಞಾನದ ಸಹಾಯದಿಂದ ಪತ್ತೆ ಹಚ್ಚಲಾಗುವುದು,"ಎಂದು ಅವರು ಹೇಳಿದರು.

ಬಾಂಗ್ಲಾದೇಶದಲ್ಲಿ ಹಿಂದು ದೇವಸ್ಥಾನಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಭಾರತ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ದುರ್ಗಾಮಾತೆಯ ಮೂರ್ತಿಗಳನ್ನು ಕೆಲ ಕಿಡಿಗೇಡಿಗಳು  ಹಾನಿಗೈಯ್ಯುತ್ತಿರುವುದು ಹಾಗೂ ದುರ್ಗಾ ಪೂಜೆ ನಡೆಯುತ್ತಿರುವ ಸ್ಥಳಗಳಲ್ಲಿ ದಾಂಧಲೆ ನಡೆಸುತ್ತಿರುವುದು ಕಾಣಿಸುತ್ತದೆ.

ಹಿಂಸಾಚಾರದ ನಂತರ ಹಝಿಗಂಜ್  ಎಂಬಲ್ಲಿ  ರ್ಯಾಲಿಗಳನ್ನು ನಿಷೇದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News