ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಕ್ರಮಕ್ಕೆ ಪ್ರಜ್ಞಾ ಠಾಕೂರ್ ವಿರೋಧ

Update: 2021-10-16 05:34 GMT
ಪ್ರಜ್ಞಾ ಠಾಕೂರ್ (ಫೋಟೊ : PTI)

ಭೋಪಾಲ್ : ಮಧ್ಯಪ್ರದೇಶದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ 12 ಲಕ್ಷ ಎತ್ತುಗಳ ’ವೃಷಣಬೀಜ ಒಡೆಯುವ’ ರಾಜ್ಯ ಸರ್ಕಾರದ ಕ್ರಮಕ್ಕೆ ಪಕ್ಷದ ಸಂಸದೆ ಪ್ರಜ್ಞಾ ಠಾಕೂರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿವಾದಾತ್ಮಕ ಸಂಸದೆಯ ನಿಲುವನ್ನು ಅಪರೂಪಕ್ಕೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಬೆಂಬಲಿಸಿದೆ.

ಇದರಿಂದಾಗಿ ರಾಜ್ಯದಲ್ಲಿ 12 ಲಕ್ಷ ಅನುತ್ಪಾದಕ ಮತ್ತು ಕಳಪೆ ಎತ್ತುಗಳ ಬೀಜ ಒಡೆಯಲು ನೀಡಿದ್ದ ಆದೇಶವನ್ನು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ.

ಆದರೆ ಈ ರಾಜಕೀಯ ವಿವಾದದ ಬಗ್ಗೆ ಪಶು ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಈ ಉದ್ದೇಶಿತ ಯೋಜನೆಯಿಂದ ದೇಶೀಯ ಗೋ ತಳಿಗೆ ಯಾವುದೇ ಅಪಾಯವಿಲ್ಲ; ಹಾಗೆ ಮಾಡದಿದ್ದರೆ ಅದು ಗ್ರಾಮೀಣ ಆರ್ಥಿಕತೆಗೆ ಪ್ರತಿಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅನುತ್ಪಾದಕ ಮತ್ತು ಕಳಪೆ ಎತ್ತುಗಳ ಸಂತಾನಶಕ್ತಿ ಹರಣ ಮಾಡುತ್ತಿರುವುದು ಇದೇ ಮೊದಲಲ್ಲ. 1998-99ರ ಬಳಿಕ 2021ರ ವರೆಗೆ 1.33 ಕೋಟಿ ಎತ್ತುಗಳ ಸಂತಾನಶಕ್ತಿ ಹರಣ ಮಾಡಲಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳುತ್ತವೆ. ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳ ಆಡಳಿತಾವಧಿಯಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದಲ್ಲಿ 2017-18ರ ಅವಧಿಯಲ್ಲಿ 10.6 ಲಕ್ಷ ಎತ್ತುಗಳ ಸಂತಾನಶಕ್ತಿ ಹರಣ ಮಾಡಿದ್ದರೆ, 2019-20ರ ಅವಧಿಯಲ್ಲಿ ಕಮಲ್‌ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ 7.61 ಹೋರಿಗಳ ಬೀಜ ಒಡೆದಿತ್ತು.

ಆದರೆ ಉಭಯ ಪಕ್ಷಗಳ ಮುಖಂಡರು ಈಗ ಇದನ್ನು ವಿರೋಧಿಸುತ್ತಿದ್ದಾರೆ. ಸರ್ಕಾರದ ಈ ಕ್ರಮ ದೇಶಿ ಗೋ ತಳಿಯನ್ನು ವಿನಾಶದ ಅಂಚಿಗೆ ಒಯ್ಯುವ ಪ್ರಯತ್ನ ಎಂದು ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್ ಟೀಕಿಸಿದ್ದಾರೆ. ಇದು ಹಲವು ವರ್ಷಗಳಿಂದ ನಡೆಯುತ್ತಿತ್ತು ಎಂದು ಗಮನ ಸೆಳೆದಾಗ, ಅದು ಹಿಂದೆಯೂ ತಪ್ಪು, ಈಗಲೂ ತಪ್ಪು ಎಂದು ಪ್ರಜ್ಞಾ ಹೇಳಿದರು. ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಕೂಡಾ ಪ್ರಜ್ಞಾ ನಿಲುವನ್ನು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News