ದೇಶಕ್ಕೆ ಮೋಸ ಮಾಡುವವರನ್ನು,ಬಡವರ ಲೂಟಿಗೈಯುವವರನ್ನು ಬಿಡುವುದಿಲ್ಲ:ಪ್ರಧಾನಿ ಮೋದಿ

Update: 2021-10-20 12:58 GMT

ಹೊಸದಿಲ್ಲಿ: ದೇಶಕ್ಕೆ ಮೋಸ ಮಾಡುವವರನ್ನು ಅಥವಾ ಬಡವರ ಲೂಟಿ ಮಾಡುವವರನ್ನು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಸರಕಾರ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಜಾಗೃತ ಆಯೋಗ (ಸಿವಿಸಿ) ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ) ಜಂಟಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ "ಸಣ್ಣ ಅಥವಾ ದೊಡ್ಡ ಭ್ರಷ್ಟಾಚಾರವು ಇನ್ನೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಇದು ದೇಶದ ಸಾಮಾನ್ಯ ನಾಗರಿಕನ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗುತ್ತದೆ ಹಾಗೂ  ರಾಷ್ಟ್ರವಾಗಿ ನಮ್ಮ ಸಾಮೂಹಿಕ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ಇಂದು ದೇಶಕ್ಕೆ ಮೋಸ ಮಾಡುವವರು, ಬಡವರನ್ನು ಲೂಟಿ ಮಾಡುವವರು, ಅವರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವರು ಯಾವುದೇ ದೇಶ, ವಿದೇಶದಲ್ಲಿ ಅಡಗಿದ್ದರೂ ಅವರಿಗೆ ಇನ್ನು ಮುಂದೆ ಕರುಣೆಯನ್ನು ತೋರಿಸುವುದಿಲ್ಲ. ಸರಕಾರವು ಅವರನ್ನು ಬಿಡುವುದಿಲ್ಲ'' ಎಂದು ಗುಡುಗಿದರು.

"ಯಾವುದೇ ಮಧ್ಯವರ್ತಿಗಳು ಅಥವಾ ಭ್ರಷ್ಟಾಚಾರವಿಲ್ಲದೆ ಸರಕಾರಿ ಯೋಜನೆಗಳನ್ನು ಈಗ ಜಾರಿಗೊಳಿಸಲಾಗುತ್ತಿದೆ. ಭ್ರಷ್ಟಾಚಾರವು ವ್ಯವಸ್ಥೆಯ ಭಾಗವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ನವ ಭಾರತವು ಇನ್ನು ಮುಂದೆ ಸಿದ್ಧವಾಗಿಲ್ಲ. ನವಭಾರತವು  ಪಾರದರ್ಶಕ ವ್ಯವಸ್ಥೆ, ದಕ್ಷ ಪ್ರಕ್ರಿಯೆ ಹಾಗೂ  ಸುಗಮ ಆಡಳಿತವನ್ನು ಬಯಸುತ್ತದೆ'' ಎಂದು ಪ್ರಧಾನಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News