ಇದು ಹಗಲು ದರೋಡೆಯಲ್ಲವೇ?

Update: 2021-10-20 17:19 GMT

ಮಾನ್ಯರೇ,

ನಾನು ಇತ್ತೀಚೆಗೆ (ಅಕ್ಟೋಬರ್ 13ರಂದು ಬೆಳಗ್ಗೆ 10:45ಗಂಟೆಗೆ) ಮಂಗಳೂರು ಜಂಕ್ಷನ್ ತಲುಪಿದೆ. ಅಲ್ಲೇ ಹೊರಗಿದ್ದ ರಿಕ್ಷಾ ಪ್ರೀಪೆಯ್ಡಾ ಕೌಂಟರ್‌ಗೆ ಹೋದಾಗ ಆಶ್ಚರ್ಯ ಕಾದಿತ್ತು. ಪ್ರಾದೇಶಿಕ ಸಾರಿಗೆ ಅಧಿಕಾರಿಯ ನಿಯಮದಂತೆ ಪ್ರೀಪೆಯ್ಡಾ ಚೀಟಿ ಮಾಡಿಸಲು ರೂ. 1 ಇತ್ತು. ಆದರೆ ನನ್ನಿಂದ ರೂ. 5 ಕಿತ್ತುಕೊಂಡರು.

ಅಲ್ಲದೆ ಮಂಗಳೂರು ಜಂಕ್ಷನ್‌ನಿಂದ ಕೇವಲ 0.35 ಕಿ.ಮೀ. ದೂರದ ಪಡೀಲ್ ಜಂಕ್ಷನ್‌ಗೆ ರಿಕ್ಷಾದಲ್ಲಿ ಪ್ರಯಾಣಿಸಲು (ಅದೂ ಬೆಳಗ್ಗೆ 10:45ಕ್ಕೆ) ಪ್ರೀಪೆಯ್ಡೆ ಚೀಟಿಯ ಪ್ರಕಾರ 50 ರೂ. ಬಿಲ್ಲು ಮಾಡಿದ್ದರು. ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಅನುಮೋದಿಸಿದ ದರ ಪಟ್ಟಿಯಂತೆ ಕನಿಷ್ಠ ದರ 1.68 ಕಿ.ಮೀ.ಗೆ ರೂ. 30. ಆಗ 0.35 ಕಿ.ಮೀ. ಹತ್ತಿರದ ಪಡೀಲಿಗೆ ಗರಿಷ್ಠ ದರ ರೂ. 30 ಆಗುತ್ತದೆ. ಪ್ರೀಪೆಯ್ಡಿ ಚೀಟಿ ಕೊಡುವವರ ಬಳಿ ಯಾವತ್ತೂ ಕಿ.ಮೀ. ದೂರದ ಪ್ರಕಾರ ದರ ಪಟ್ಟಿ ಇರುತ್ತದೆ ಆದರೂ ಅರ್ಧ ಕಿ.ಮೀ. ದೂರವೂ ಇಲ್ಲದ ಪ್ರದೇಶಕ್ಕೆ ತೆರಳಲು 50 ರೂ. ದರ ಚೀಟಿ ನೀಡಲು ಇವರಿಗೆ ಅಧಿಕಾರ ನೀಡಿದವರು ಯಾರು?

ಪ್ರಯಾಣಿಕರಿಗೆ ಮೋಸವಾಗುವುದನ್ನು ತಪ್ಪಿಸಲು ರೈಲ್ವೆ ಯಾತ್ರಿ ಸಂಘಗಳು ಹರಸಾಹಸಪಟ್ಟು ಪ್ರೀಪೆಯ್ಡಿ ಕೌಂಟರ್ ಬೇಕೆಂದು ವಿನಂತಿಸಿದ್ದರು. ಆದರೀಗ ಪ್ರಯಾಣಿಕರಿಗೆ ಮೋಸ ಮಾಡಲೆಂದೇ ಪ್ರೀಪೆಯ್ಡಿ ಕೌಂಟರ್ ಹುಟ್ಟಿದಂತಾಯಿತು. ಆದ್ದರಿಂದ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆಗಾಗ ಮಿಂಚಿನ ಕಾರ್ಯಾಚರಣೆ ನಡೆಸಿ ದರ್ಪದಿಂದ, ತಮ್ಮ ಮನಸೋ ಇಚ್ಛೆ ಪ್ರಯಾಣಿಕರನ್ನು ದೋಚುವ ಈ ವ್ಯವಸ್ಥೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೀಗೆ ಲೂಟಿಗೊಳಗಾಗುವುದರ ಬದಲು ಮಂಗಳೂರು ಜಂಕ್ಷನ್‌ನಿಂದ ಹೊರಬಂದಾಗ ಎಡಕ್ಕೆ ತಿರುವು ಇರುವ ಮಾರ್ಗದಲ್ಲಿ ಕೇವಲ 3 ನಿಮಿಷ ನಡೆದು ನ್ಯಾಷನಲ್ ಹೈವೇಗೆ ಬಂದು ಬೇರೆ ರಿಕ್ಷಾದ ಮೂಲಕ ಮೀಟರ್ ಹಾಕಿ ತಮ್ಮ ಗಮ್ಯ ಸ್ಥಳಕ್ಕೆ ಪ್ರಯಾಣಿಸುವುದು ಸೂಕ್ತವಾಗಿದೆ.
 

Writer - -ರಮೇಶ್ ಕಾಮತ್, ಬಂಟ್ವಾಳ

contributor

Editor - -ರಮೇಶ್ ಕಾಮತ್, ಬಂಟ್ವಾಳ

contributor

Similar News