ಮಳೆಯಿಂದ ತತ್ತರಿಸಿರುವ ಉತ್ತರಾಖಂಡದ ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್ ಶಾ

Update: 2021-10-21 17:58 GMT

ಡೆಹ್ರಾಡೂನ್‌ಅ.21: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಉತ್ತರಾಖಂಡದಲ್ಲಿ ಭಾರೀ ಮಳೆಯಿಂದ ತೀವ್ರ ಹಾನಿಯುಂಟಾಗಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು. ರಸ್ತೆ ಸಂಪರ್ಕ ಮರುಸ್ಥಾಪನೆ ಮತ್ತು ಅಪಾಯದ ಪ್ರದೇಶಗಳಿಂದ ಜನರನ್ನು ತೆರವುಗೊಳಿಸಲು ಪ್ರಯತ್ನಗಳ ನಡುವೆಯೇ ಮಳೆಯಿಂದ ತೀವ್ರ ತೊಂದರೆಗೆ ಸಿಲುಕಿರುವ ಕುಮಾಂವ್ ಪ್ರದೇಶದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ಸಾಗುತ್ತಿವೆ.

ಉತ್ತರಾಖಂಡ ರಾಜ್ಯಪಾಲ ಲೆ.ಜ.(ನಿವೃತ್ತ)ಗುರ್ಮೀತ್ ಸಿಂಗ್, ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ,ಕೇಂದ್ರ ಸಹಾಯಕ ರಕ್ಷಣಾ ಸಚಿವ ಅಜಯ ಭಟ್ಟ ಮತ್ತು ರಾಜ್ಯ ವಿಕೋಪ ನಿರ್ವಹಣಾ ಸಚಿವ ಧನಸಿಂಗ್ ರಾವತ್ ಅವರು ಶಾ ಜೊತೆಯಲ್ಲಿದ್ದರು.
ವೈಮಾನಿಕ ಸಮೀಕ್ಷೆಯ ಬಳಿಕ ಶಾ ಅವರು ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು.

ಮೂರು ದಿನಗಳ ನಿರಂತರ ಮಳೆಯಿಂದಾಗಿ 7,000 ಕೋ.ರೂ.ಗಳ ಹಾನಿಯುಂಟಾಗಿದೆ. ರಸ್ತೆ ಸಂಪರ್ಕ ಜಾಲ ಮತ್ತು ಸೇತುವೆಗಳ ಮರುಸ್ಥಾಪನೆ ಹಾಗೂ ಸುರಕ್ಷಿತ ಸ್ಥಳಗಳಿಗೆ ಜನರನ್ನು ತೆರವುಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಧಾಮಿ ಸುದ್ದಿಗಾರರಿಗೆ ತಿಳಿಸಿದರು.
ಈ ನಡುವೆ ರಾಜ್ಯದಲ್ಲಿ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಮೃತರ ಸಂಖ್ಯೆ 54ಕ್ಕೇರಿದ್ದು,19 ಜನರು ಗಾಯಗೊಂಡಿದ್ದಾರೆ. ಐವರು ಈಗಲೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಗುರುವಾರ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ನೈನಿತಾಲ ಜಿಲ್ಲೆಯಲ್ಲಿ ಗರಿಷ್ಠ 28 ಸಾವುಗಳು ಸಂಭವಿಸಿವೆ.

ಭಾರೀ ಮಳೆ ಮತ್ತು ನೈನಿ ಸರೋವರದಲ್ಲಿ ನೆರೆಯಿಂದಾಗಿ ನೈನಿತಾಲ್‌ನ ಧೋಬಿ ಘಾಟ್ ಸುತ್ತಲಿನ ಪ್ರದೇಶದಲ್ಲಿ ಭೂಕುಸಿತಗಳು ಸಂಭವಿಸುತ್ತಿವೆ ಎಂದು ಜಿಲ್ಲಾಡಳಿತವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News