ಉತ್ತರಾಖಂಡ ಮೇಘಸ್ಫೋಟಕ್ಕೆ 9 ಚಾರಣಿಗರು ಸೇರಿ 64 ಬಲಿ

Update: 2021-10-22 03:34 GMT

ಡೆಹ್ರಾಡೂನ್/ ಶಿಮ್ಲಾ, ಅ.22: ಮೇಘಸ್ಫೋಟದಿಂದ ಉದ್ಭವಿಸಿದ ಭೀಕರ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉತ್ತರಾಖಂಡದಲ್ಲಿ ಮಳೆ ಸಂಬಂಧಿ ದುರಂತಗಳಿಂದ ಮೃತಪಟ್ಟವರ ಮತ್ತಷ್ಟು ದೇಹಗಳು ಪತ್ತೆಯಾಗಿವೆ. ಜತೆಗೆ ನಾಪತ್ತೆಯಾದ ಮತ್ತಷ್ಟು ಮಂದಿ ಸಾವಿಗೀಡಾಗಿರುವುದನ್ನು ದೃಢಪಡಿಸಲಾಗಿದ್ದು, ಸಾವಿನ ಸಂಖ್ಯೆ 64ಕ್ಕೇರಿದೆ. ಮೃತಪಟ್ಟವರಲ್ಲಿ ಒಂಭತ್ತು ಮಂದಿ ಚಾರಣಿಗರು ಸೇರಿದ್ದು, ಈ ಪೈಕಿ ಐದು ಮಂದಿ ಹಿಮಾಚಲ ಪ್ರದೇಶದ ಕಿನ್ನೂರ್‌ನಲ್ಲಿ ಜೀವ ಕಳೆದುಕೊಂಡಿದ್ದಾರೆ.

ನೈನಿತಾಲ್‌ನಲ್ಲಿ ಗರಿಷ್ಠ ಸಾವು ಸಂಭವಿಸಿದ್ದು, ಇದುವರೆಗೆ 34 ಮಂದಿ ಮಳೆಸಂಬಂಧಿ ದುರಂತದಿಂದ ಸಾವಿಗೀಡಾಗಿದ್ದಾರೆ. ಚಂಪಾವತ್ ಜಿಲ್ಲೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಎನ್‌ಡಿಆರ್‌ಎಫ್‌ನ 17 ತುಕಡಿಗಳು, ಎಸ್‌ಡಿಆರ್‌ಎಫ್‌ನ 60 ತಂಡಗಳು, ಪಿಎಸಿಯ 15 ತುಕಡಿಗಳು ಮತ್ತು 5000 ಮಂದಿ ಪೊಲೀಸ್ ಸಿಬ್ಬಂದಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಮಳೆ ಸಂಬಂಧಿ ಅನಾಹುತಗಳಿಂದ ಆಗಿರುವ ಹಾನಿ ಸುಮಾರು 7,000 ಕೋಟಿ ರೂಪಾಯಿಗಿಂತಲೂ ಅಧಿಕ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರಕಟಿಸಿದ್ದಾರೆ. ಅಂತಿಮ ಮೌಲ್ಯಮಾಪನದ ಬಳಿಕ ನಷ್ಟದ ಪ್ರಮಾಣ 10 ಸಾವಿರ ಕೋಟಿ ರೂ. ಮೀರುವ ನಿರೀಕ್ಷೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉತ್ತರಾಖಂಡದ ಹಸ್ರಿಲ್‌ನಿಂದ ಹಿಮಾಚಲ ಪ್ರದೇಶದ ಚಿತ್ಕುಲಕ್ಕೆ ಚಾರಣ ಹೊರಟಿದ್ದ 11 ಮಂದಿ ಪರ್ವತಾರೋಹಿಗಳು ನಾಪತ್ತೆಯಾದ ಒಂದು ದಿನದ ಬಳಿಕ ಐದು ಮಂದಿಯ ಮೃತದೇಹಗಳು ಕಿನ್ನೂರಿನಲ್ಲಿ ಪತ್ತೆಯಾಗಿವೆ. ಇಬ್ಬರನ್ನು ರಕ್ಷಿಸಲಾಗಿದೆ. ಕೊಲ್ಕತ್ತಾದ ನಾಲ್ಕು ಮಂದಿ ಸುಂದರ್‌ದುಂಗಾ ಕಣಿವೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News