ಪಿಂಚಣಿ ಏರಿಕೆಯಾಗಲಿ

Update: 2021-10-25 18:16 GMT

ಮಾನ್ಯರೇ,

      ರಾಜ್ಯ ಸರಕಾರಿ ನೌಕರರ ಹಾಲಿ ನಿವೃತ್ತಿ ವಯಸ್ಸು ಅರವತ್ತು ಎಂದು ನಿಗದಿಯಾಗಿದೆ. ನಿವೃತ್ತಿ ಹೊಂದಿದವರು ಪಿಂಚಣಿಯಿಂದ ಬರುವ ಹಣದಿಂದಲೇ ಇಳಿವಯಸ್ಸಿನಲ್ಲಿ ನಿವೃತ್ತಿದಾರನ ಅವಲಂಬಿತರೊಂದಿಗೆ ಜೀವನ ನಿರ್ವಹಣೆ ಮಾಡುವ ಅನಿವಾರ್ಯತೆ ಇರುತ್ತದೆ. ಈ ಹಣದಿಂದ ಪಿಂಚಣಿದಾರರು ಪತ್ನಿ/ಪತಿ ಮತ್ತು ಕುಟುಂಬದ ಜವಾಬ್ದಾರಿಯನ್ನು ಕೂಡ ಹೊರಬೇಕಾದ ಸಂದರ್ಭಗಳೂ ಇವೆ. ಅಲ್ಲದೆ ಮಕ್ಕಳ ಆಶ್ರಯ ಇಲ್ಲದಿದ್ದರೆ ಪಿಂಚಣಿಯಿಂದ ಬರುವ ಅಲ್ಪಹಣದಿಂದಲೇ ಆಹಾರ, ಬಟ್ಟೆ, ದಿನನಿತ್ಯದ ಅಗತ್ಯ ಖರೀದಿಗಳಿಗೆ ಹಣದ ಅವಶ್ಯಕತೆ ಮುಖ್ಯವಾಗಿರುತ್ತದೆ. ಅದರಲ್ಲೂ ವಯೋಸಹಜವಾಗಿ ಬರುವ ಕಾಯಿಲೆಗಳಿಗಾಗಿ ಔಷಧ ಖರೀದಿ ಮತ್ತು ಆಸ್ಪತ್ರೆ ವೆಚ್ಚಗಳಿಗಾಗಿಯೇ ಪಿಂಚಣಿಯ ಹೆಚ್ಚು ಹಣ ವ್ಯಯವಾಗುತ್ತದೆ. ಈ ವಯಸ್ಸಿನಲ್ಲಿ ಇವರನ್ನು ನೋಡಿಕೊಳ್ಳುವವರು ಇಲ್ಲದಿದ್ದಲ್ಲಿ ಇವರ ಪಾಡು ಹೇಳತೀರದು. ಇವೆಲ್ಲ ಕಾರಣದಿಂದಾಗಿ ಇವರನ್ನು ಪಿಂಚಣಿಯೇ ಸಾಕಬೇಕಾಗಿರುತ್ತದೆ.

ಈಗಿರುವ ನಿಯಮದಂತೆ ನಿವೃತ್ತರಾದವರು 80ರಿಂದ 100ರ ವಯಸ್ಸು ತಲುಪಿದಾಗ ಅವರ ಮೂಲ ಪಿಂಚಣಿಯನ್ನು ಕ್ರಮವಾಗಿ ಶೇ. 20ರಿಂದ 100ರ ಪ್ರಮಾಣಗಳಲ್ಲಿ ಹೆಚ್ಚಿಸುವ ಬಹಳ ಹಿಂದಿನ ಆದೇಶವಿದೆ. ಆದರೆ ಈ ಆದೇಶ ಇಂದಿನ ಜೀವಿತಾವಧಿ ಲೆಕ್ಕದಲ್ಲಿ ಮಹತ್ವ ಕಳೆದುಕೊಂಡಿದೆಯೆಂದೇ ಹೇಳಬಹುದು. ಹೇಗೆಂದರೆ ಇಂದಿನ ಜೀವನಶೈಲಿಯಲ್ಲಿ ವ್ಯಕ್ತಿಯು ನೂರ್ಕಾಲ ಬದುಕುವುದು ವಿರಳಾತಿವಿರಳ. ಏನೇ ಅಂದರೂ 90 ವರ್ಷ ಬದುಕಿದ್ದೇವೆ ಅಂದರೇನೆ ಸೋಜಿಗದ ವಿಷಯವಾಗಿದೆ. ಹೀಗಾಗಿ ವಯಸ್ಸಾದ ಹಾಗೆ ವ್ಯಕ್ತಿಯ ಆರೋಗ್ಯ ಕ್ಷೀಣಿಸುತ್ತಾ ಹೋಗಿ ವೈದ್ಯಕೀಯ ವೆಚ್ಚಗಳು ದ್ವಿಗುಣಗೊಳ್ಳುವುದಲ್ಲದೆ ಆರ್ಥಿಕ ಸಂಕಷ್ಟಕ್ಕೂ ಸಿಲುಕಿ ನರಳುವ ಸ್ಥಿತಿಗೆ ತಲುಪುತ್ತಾರೆ. ಮೇಲಾಗಿ ಯಾರೂ ಇವರ ಆರೈಕೆ ಸಹ ಮಾಡುವ ಅವಕಾಶಗಳೂ ಕಡಿಮೆ. ಆದುದರಿಂದ ಸರಕಾರವು 80 ವರ್ಷ ಮೀರಿದವರಿಗೆ ಮಾತ್ರ ಪಿಂಚಣಿ ಮೂಲವೇತನವನ್ನು ಹಂತ ಹಂತವಾಗಿ ಹೆಚ್ಚಿಸುವ ಪದ್ಧತಿಯನ್ನು 70 ವರ್ಷ ತಲುಪುವ ಪಿಂಚಣಿದಾರರಿಗೂ ಹೆಚ್ಚಿಸುವುದು ಸೂಕ್ತ. ಕನಿಷ್ಠಪಕ್ಷ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ನಿವೃತ್ತಿ ಹೊಂದಿದವರಿಗಾದರೂ ಜಾರಿಗೆ ತಂದಲ್ಲಿ ಕಡಿಮೆ ಪಿಂಚಣಿ ಪಡೆಯುವ ನಮ್ಮಂತಹವರಿಗೆ ಸ್ವಲ್ಪಮಟ್ಟಿಗೆ ಆರ್ಥಿಕ ಬಲ ನೀಡಿದಂತಾಗುತ್ತದೆ.

Writer - -ಸಂಕಪ್ಪ ಜಿ.ಎಚ್., ಬೆಂಗಳೂರು

contributor

Editor - -ಸಂಕಪ್ಪ ಜಿ.ಎಚ್., ಬೆಂಗಳೂರು

contributor

Similar News