​ಹೊಸ ಕೋವಿಡ್ ಸೋಂಕಿತರಲ್ಲಿ ಲಸಿಕೆ ಪಡೆದವರೇ ಅಧಿಕ !

Update: 2021-10-26 03:37 GMT
ಮಮತಾ ಬ್ಯಾನರ್ಜಿ (ಫೋಟೊ : PTI)

ಸಿಲಿಗುರಿ: ರಾಜ್ಯದಲ್ಲಿ ಹೊಸದಾಗಿ ಕೋವಿಡ್-19 ಸೋಂಕಿಗೆ ತುತ್ತಾಗಿರುವವರ ಪೈಕಿ ಕೋವಿಡ್-19 ವಿರುದ್ಧ ಎರಡೂ ಲಸಿಕೆ ಪಡೆದವರೇ ಅಧಿಕ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಎರಡೂ ಡೋಸ್ ಪಡೆದವರ ಪ್ರತಿರೋಧ ಶಕ್ತಿ ಆರು ತಿಂಗಳಿಗಿಂತ ಹೆಚ್ಚು ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಅಂಶವನ್ನು ಕೇಂದ್ರದ ಜತೆ ಚರ್ಚಿಸಿ ಇದಕ್ಕೆ ಏನು ಕಾರಣ ಎಂದು ಪತ್ತೆ ಮಾಡುವಂತೆ ರಾಜ್ಯದ ಆರೋಗ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

"ಲಸಿಕೆ ಪಡೆದ ಬಳಿಕ ಸೋಂಕಿಗೆ ತುತ್ತಾಗುತ್ತಿರುವ ಈ ಮಂದಿ ಸಾವಿಗೀಡಾಗದಿರಬಹುದು. ಆದರೆ ಇವರ ಪ್ರತಿರೋಧ ಶಕ್ತಿ ಏಕೆ ಕುಸಿದಿದೆ ? ಇದು ಕೇವಲ ಒಂದು ಪ್ರಕರಣಲ್ಲಿ ಮಾತ್ರ ಅಲ್ಲ; ಇಂಥ ಹಲವು ಪ್ರಕರಣಗಳಿವೆ" ಎಂದು ಹೇಳಿದ್ದಾರೆ. ದುರ್ಗಾಪೂಜೆ ಹಬ್ಬದ ಬಳಿಕ ಪಶ್ಚಿಮ ಬಂಗಾಳದಲ್ಲಿ ಹೊಸ ಪ್ರಕರಣಗಳು ದಿಢೀರನೇ ಹೆಚ್ಚುತ್ತಿವೆ.

ಹೊಸ ಸೋಂಕಿತರಲ್ಲಿ ಬಹುತೇಕ ಮಂದಿ ಎರಡೂ ಡೋಸ್‌ಗಳನ್ನು ಪಡೆದಿರುವವರು. ಇದಕ್ಕೆ ವರದಿಗಳಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಲಸಿಕೆಯಿಂದ ಸೃಷ್ಟಿಯಾದ ಪ್ರತಿರೋಧ ಶಕ್ತಿ ಆರು ತಿಂಗಳಾಚೆಗೆ ಇರುವುದಿಲ್ಲ. ನಮಗೆಲ್ಲರಿಗೂ ಇದು ತಿಳಿದಿದೆ. ಆದರೆ ಇದನ್ನು ಮನೆಯಿಂದ ಹೊರಗೆ ಮಾತನಾಡಲು ಎಷ್ಟು ಮಂದಿ ಶಕ್ತರಿದ್ದೀರಿ ಎನ್ನುವುದು ತಿಳಿಯದು. ಆದರೆ ವಾಸ್ತವ ಹಾಗೆಯೇ ಉಳಿಯುತ್ತದೆ" ಎಂದು ಉತ್ತರ ಕನ್ಯಾದಲ್ಲಿ ನಡೆದ ಆಡಳಿತಾತ್ಮಕ ಸಭೆಯಲ್ಲಿ ಮಮತಾ ಹೇಳಿದರು.

ಲಸಿಕೆ ಪಡೆದ ಬಳಿಕವೂ ಜನ ಏಕೆ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಬರೆದು ಸ್ಪಷ್ಟನೆ ಪಡೆಯುವಂತೆ ಆರೋಗ್ಯ ಕಾರ್ಯದರ್ಶಿ ಎನ್.ಎಸ್.ನಿಗಮ್ ಅವರಿಗೆ ಮಮತಾ ಸೂಚಿಸಿದರು. ಎರಡೂ ಡೋಸ್ ಪಡೆದ ಬಳಿಕವೂ ಪ್ರತಿರೋಧ ಶಕ್ತಿ ಇಳಿದಿರುವುದು ಏಕೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನ ನಡೆಸುತ್ತದೆಯೇ ಎಂಬ ಮಾಹಿತಿ ಪಡೆಯುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News