ರೊಹಿಂಗ್ಯಾ ವಲಸಿಗರನ್ನು ಗಡಿಪಾರು ಮಾಡುವ ಯೋಜನೆ ಸದ್ಯಕ್ಕೆ ಇಲ್ಲ: ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ ಕರ್ನಾಟಕ ಸರಕಾರ

Update: 2021-10-26 16:57 GMT

ಹೊಸದಿಲ್ಲಿ, ಅ. 26: ಬೆಂಗಳೂರಿನಲ್ಲಿ ವಾಸಿಸುತ್ತಿರುವ 72 ಮಂದಿ ರೊಹಿಂಗ್ಯಾ ವಲಸಿಗರನ್ನು ಗಡಿಪಾರು ಮಾಡುವ ಯೋಜನೆ ಸದ್ಯಕ್ಕೆ ಇಲ್ಲ ಎಂದು ಬಿಜೆಪಿ ನೇತೃತ್ವದ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಅಕ್ರಮ ರೊಹಿಂಗ್ಯಾ ವಲಸಿಗರನ್ನು ಗಡಿಪಾರು ಮಾಡಲು ನಿರ್ದೇಶನ ನೀಡುವಂತೆ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಕರ್ನಾಟಕ ರಾಜ್ಯ ಸರಕಾರ ಈ ಲಿಖಿತ ಪ್ರತಿಕ್ರಿಯೆ ಸಲ್ಲಿಸಿದೆ. ವಕೀಲ ಎನ್.ವಿ. ರಘುಪತಿ ಅವರ ಮೂಲಕ ಆಕ್ಷೇಪಣೆ ಸಲ್ಲಿಸಿದ್ದು, ಗಡಿಪಾರು ಮಾಡುವಂತೆ ನಿರ್ದೇಶಿಸಿ ಸಲ್ಲಿಸಲಾದ ಮನವಿುನ್ನು ವಜಾಗೊಳಿಸುವಂತೆ ಕೋರಿದೆ.

‘‘ಬೆಂಗಳೂರು ನಗರ ಪೊಲೀಸರು ರೊಹಿಂಗ್ಯಾ ವಲಸಿಗರನ್ನು ತಮ್ಮ ವ್ಯಾಪ್ತಿಯ ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರಗಳಲ್ಲಿ ಹಾಕಿಲ್ಲ. ಬೆಂಗಳೂರಿನಲ್ಲಿ ಗುರುತಿಸಲಾಗಿರುವ 72 ರೊಹಿಂಗ್ಯಾ ವಲಸಿಗರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸರು ಅವರ ವಿರುದ್ಧ ಈಗ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಅವರನ್ನು ಕೂಡಲೇ ಗಡಿಪಾರು ಮಾಡುವ ಯೋಜನೆ ಸದ್ಯಕ್ಕೆ ಇಲ್ಲ’’ ಎಂದು ರಾಜ್ಯ ಸರಕಾರ ತನ್ನ ಅಫಿಡಾವಿಟ್ನಲ್ಲಿ ಹೇಳಿದೆ. 

ಒಂದು ವರ್ಷದ ಒಳಗೆ ಬಾಂಗ್ಲಾದೇಶಿಗಳು ಹಾಗೂ ರೊಹಿಂಗ್ಯಾರು ಸೇರಿದಂತೆ ಎಲ್ಲ ಅಕ್ರಮ ವಲಸಿಗರು ಹಾಗೂ ಒಳ ನುಸುಳುಕೋರರನ್ನು ಗುರುತಿಸಬೇಕು, ಬಂಧಿಸಬೇಕು, ಗಡಿಪಾರು ಮಾಡಬೇಕು. ಈ ಬಗ್ಗೆ ಕೇಂದ್ರ ರಾಜ್ಯಗಳಿಗೆ ಸೂಚಿಸಬೇಕು. ಅಕ್ರಮ ವಲಸೆ ಹಾಗೂ ನುಸುಳುಕೋರತನದ ವಿರುದ್ಧ ಜಾಮೀನು ರಹಿತ ಹಾಗೂ ಗಂಭೀರ ಪ್ರಕರಣವಾಗಿ ಪರಿಗಣಿಸಲು ಕಾನೂನು ತಿದ್ದುಪಡಿ ಮಾಡಲು ನಿರ್ದೇಶನ ನೀಡಬೇಕು ಎಂದು ಉಪಾಧ್ಯಾಯ ಅವರು ನ್ಯಾಯಾಲಯದಲ್ಲಿ ಮನವಿಯಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News