ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ಮೂರು ಬಾರಿ ಸಿಮ್‌ ಬದಲಾಯಿಸಿದ್ದೇನೆ: ಕಾಮೆಡಿಯನ್‌ ಮುನವ್ವರ್‌ ಫಾರೂಕಿ

Update: 2021-10-31 13:16 GMT

ಮುಂಬೈ: "ದೇಶದ ಜನರು ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಬಹುದಾದರೆ, ಏನನ್ನು ವೀಕ್ಷಿಸಬೇಕು ಎಂಬುವುದನ್ನೂ ಅವರು ನಿರ್ಧರಿಸಬಹುದು" ಎಂದು ಸ್ಟ್ಯಾಂಡ್‌ ಅಪ್‌ ಕಾಮೆಡಿಯನ್‌ ಮುನವ್ವರ್‌ ಫಾರೂಕಿ ಹೇಳಿಕೆ ನೀಡಿದ್ದಾರೆ. ಮುಂಬೈನಲ್ಲಿ ನಡೆಯಲಿದ್ದ ಮೂರು ಕಾಮಿಡಿ ಶೋಗಳನ್ನು ಬಜರಂಗದಳದ ಬೆದರಿಕೆ ಕರೆಗಳ ಬಳಿಕ ರದ್ದುಗೊಳಿಸಿದ ಕುರಿತು ಮುನವ್ವರ್‌ ಫಾರೂಕಿ ndtv.com  ಜೊತೆ ಮಾತನಾಡಿದ್ದಾರೆ.

"ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ್ದಾರೆ" ಎಂಬ ಆರೋಪದ ಮೇರೆಗೆ ವರ್ಷಾರಂಭದಲ್ಲಿ ಮುನವ್ವರ್‌ ಫಾರೂಕಿ ಒಂದು ತಿಂಗಳ ಕಾಲ ಜೈಲಿನಲ್ಲಿದ್ದರು. ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕವೂ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ‌ ಎಂದು ಅವರು ಹೇಳಿದ್ದಾರೆ.

"ನನಗೆ ದಿನಂಪ್ರತಿ 50 ಬೆದರಿಕೆ ಕರೆಗಳು ಬರುತ್ತವೆ. ನಾನು ನನ್ನ ಸಿಮ್‌ ಕಾರ್ಡ್‌ ಅನ್ನು ಮೂರು ಬಾರಿ ಬದಲಾಯಿಸಬೇಕಾಗಿತ್ತು. ನನ್ನ ನಂಬರ್‌ ಸೋರಿಕೆಯಾದಾಗ ಜನರು ಕರೆಮಾಡಿ ನಿಂದಿಸುತ್ತಾರೆ" ಎಂದು ಅವರು ಹೇಳಿದ್ದಾರೆ.

ಹಿಂದುತ್ವ ಸಂಘಟನೆಯ ಸದಸ್ಯರು ಕಾರ್ಯಕ್ರಮ ನಡೆಯುವ ಸ್ಥಳವನ್ನು ಸುಟ್ಟು ಹಾಕುತ್ತೇವೆಂದು ಬೆದರಿಕೆಯೊಡ್ಡಿದ ಬಳಿಕ ಅವರ ಮುಂಬೈ ಪ್ರದರ್ಶನಗಳನ್ನು ರದ್ದುಪಡಿಸಲಾಗಿತ್ತು. ಈ ಕುರಿತು ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದ ಫಾರೂಕಿ, "ನನಗೆ ನನ್ನ ಪ್ರೇಕ್ಷಕರ ಸುರಕ್ಷತೆ ಮುಖ್ಯ" ಎಂದು ಟ್ವೀಟ್‌ ಮಾಡಿದ್ದರು.

"ಇಂತಹಾ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ನಮ್ಮ ದೇಶದಲ್ಲಿ ಹಲವಾರು ತಪ್ಪುಗಳು ನಡೆಯುತ್ತಿವೆ. ಕಾರ್ಯಕ್ರಮ ರದ್ದತಿಯ ಹಿಂದಿನ ಗಂಭೀರ ವಿಚಾರವೆಂದರೆ 1,500 ಮಂದಿ ಒಂದು ತಿಂಗಳ ಹಿಂದೆಯೇ ಟಿಕೆಟ್‌ ಖರೀದಿಸಿದ್ದರು. ಅವರ ಕುರಿತು ನನಗೆ ಬೇಸರವಾಗುತ್ತಿದೆ. ಈ ದೇಶದಲ್ಲಿ ಹಲವಾರು ಮಂದಿ ಈ ದುಃಖಕರ ನೈಜತೆಯೊಂದಿಗೆ ಬದುಕುತ್ತಿದ್ದಾರೆ. ಕೆಲವು ಸಂದರ್ಭದದಲ್ಲಿ ನಾನು ತಪ್ಪು ಮಾಡಿದ್ದೇನೆಂದು ಭಾಸವಾಗುತ್ತದೆ. ಆದರೆ ಕೆಲ ಜನರು ಇದರಿಂದ ರಾಜಕೀಯ ಲಾಭ ಪಡೆಯುತ್ತಾರೆ ಎನ್ನುವುದು ಬಳಿಕ ಅರ್ಥವಾಯಿತು. ಎಲ್ಲರನ್ನೂ ಗುರಿಪಡಿಸಲಾಗುತ್ತದೆ. ನನ್ನ ವಿಚಾರದಲ್ಲಿ ಅದು ಧರ್ಮದ ಆಧಾರದಲ್ಲಿದೆ ಎನ್ನುವುದು ನನ್ನನ್ನು ಭಯಪಡಿಸುತ್ತದೆ" ಎಂದು ಅವರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News