ಟ್ವೆಂಟಿ-20 ವಿಶ್ವಕಪ್:ನಮೀಬಿಯಕ್ಕೆ ಸೋಲುಣಿಸಿದ ಅಫ್ಘಾನಿಸ್ತಾನ

Update: 2021-10-31 13:45 GMT
photo: twitter

 ಅಬುಧಾಬಿ, ಅ.31: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಸುತ್ತಿನಲ್ಲಿ ಅಫ್ಘಾನಿಸ್ತಾನವು ನಮೀಬಿಯ ತಂಡವನ್ನು 62 ರನ್‌ಗಳ ಅಂತರದಿಂದ ಸೋಲಿಸಿ ಗಮನ ಸೆಳೆದಿದೆ. ಗೆಲ್ಲಲು 161 ರನ್ ಸವಾಲು ಪಡೆದಿದ್ದ ನಮೀಬಿಯ 20 ಓವರ್‌ಗಳಲಿ 9 ವಿಕೆಟ್‌ಗಳ ನಷ್ಟಕ್ಕೆ 98 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ತಲಾ 3 ವಿಕೆಟ್‌ಗಳನ್ನು ಪಡೆದಿರುವ ಹಮೀದ್ ಹಸನ್(3-9) ಹಾಗೂ ನವೀನ್-ವುಲ್‌ಹಕ್(3-26) ನಮೀಬಿಯವನ್ನು ಕಾಡಿದರು. ಗುಲ್ಬದ್ದೀನ್ ನೈಬ್(2-18) ಹಾಗೂ ರಶೀದ್ ಖಾನ್(1-14) ಮೂರು ವಿಕೆಟ್ ಹಂಚಿಕೊಂಡರು.

ನಮೀಬಿಯದ ಪರ ಡೇವಿಡ್ ವೈಸ್(26, 30 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಜಾನ್ ನಿಕೊಲ್(14), ಮೈಕಲ್ ವಾನ್ (11)ನಾಯಕ ಗೆರ್ಹಾರ್ಡ್ ಎರಾಸ್ಮಸ್(12)ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಅಫ್ಘಾನಿಸ್ತಾನವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್ ಮುಹಮ್ಮದ್ ಶಹಝಾದ್(45, 33 ಎಸೆತ, 3 ಬೌಂಡರಿ, 2 ಸಿಕ್ಸರ್)ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ಹಝ್ರತುಲ್ಲಾ ಝಝೈ(33, 27 ಎಸೆತ, 4 ಬೌಂ., 2 ಸಿ.)ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಶಹಝಾದ್ ಮೊದಲ ವಿಕೆಟ್ ಗೆ 53 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು.

ಕೊನೆಯ ಪಂದ್ಯವನ್ನಾಡಿದ ಮಾಜಿ ನಾಯಕ ಅಸ್ಘರ್ ಅಫ್ಘಾನ್ 31 ರನ್(23 ಎಸೆತ, 3 ಬೌಂ.1 ಸಿ.) ಹಾಗೂ ನಾಯಕ ಮುಹಮ್ಮದ್ ನಬಿ(ಔಟಾಗದೆ 32, 17 ಎಸೆತ, 5 ಬೌಂ.1 ಸಿ.)ಎರಡಂಕೆಯ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News