ವಾಟ್ಸ್ಯಾಪ್ ಚಾಟ್‍ಗಳೊಂದೇ ಡ್ರಗ್ಸ್ ಪೂರೈಸಿದ್ದರೆಂಬುದಕ್ಕೆ ಆಧಾರವಾಗುವುದಿಲ್ಲ ಎಂದ ನ್ಯಾಯಾಲಯ

Update: 2021-11-01 11:34 GMT

ಹೊಸದಿಲ್ಲಿ: ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹಾಗೂ ಕಳೆದ ಶನಿವಾರ ಬಿಡುಗಡೆಗೊಂಡಿದ್ದ ಆಚಿತ್ ಕುಮಾರ್ ಅವರ ವಾಟ್ಸ್ಯಾಪ್ ಚಾಟ್‍ಗಳ  ಒಂದೇ ಆಧಾರದಲ್ಲಿ ಅವರು ಸಹ ಆರೋಪಿ ಆರ್ಯನ್ ಖಾನ್ ಅವರಿಗೆ ಡ್ರಗ್ಸ್ ಸರಬರಾಜು ಮಾಡಿದ್ದರೆಂದು  ಹೇಳಲಾಗುವುದಿಲ್ಲ ಎಂದು ಕುಮಾರ್ ಅವರಿಗೆ ಜಾಮೀನು ನೀಡುವ ವೇಳೆ ವಿಶೇಷ ಎನ್‍ಡಿಪಿಎಸ್ ನ್ಯಾಯಾಲಯ ಹೇಳಿದೆ.

ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯುರೋದ ಪಂಚನಾಮೆಯನ್ನೂ ನ್ಯಾಯಾಲಯ ತನ್ನ ಜಾಮೀನು ಆದೇಶದಲ್ಲಿ ಪ್ರಶ್ನಿಸಿದೆಯಲ್ಲದೆ ಅದು ಶಂಕಾಸ್ಪದವಾಗಿರುವಂತೆ ತೋರುತ್ತಿದೆ ಎಂದಿದೆ.

ಆರ್ಯನ್ ಖಾನ್ ಅವರೊಂದಿಗಿನ ವಾಟ್ಸ್ಯಾಪ್ ಚಾಟ್‍ಗಳನ್ನು ಹೊರತುಪಡಿಸಿ ಕುಮಾರ್ ಅವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ವಿಶೇಷ ನ್ಯಾಯಾಧೀಶ ವಿ ವಿ ಪಾಟೀಲ್ ತಮ್ಮ ಜಾಮೀನು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಆರ್ಯನ್ ಖಾನ್ ಮತ್ತು ಅರ್ಬಾಝ್ ಮರ್ಚಂಟ್ ಅವರಿಗೆ ಕಳೆದ ಗುರುವಾರ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಇವರಿಬ್ಬರನ್ನು ಅಕ್ಟೋಬರ್ 3ರಂದು ಬಂಧಿಸಲಾಗಿದ್ದರೆ, ಕುಮಾರ್ ಅವರನ್ನು ಆರ್ಯನ್ ಮತ್ತು ಅರ್ಬಾಝ್ ನೀಡಿದ ಹೇಳಿಕೆಗಳನ್ನಾಧರಿಸಿ ಬಂಧಿಸಲಾಗಿತ್ತು.

ಅಚ್ಚರಿಯೆಂಬಂತೆ ಕುಮಾರ್‍ಗೆ ಜಾಮೀನು ನೀಡುವಾಗ, ವಾಟ್ಸ್ಯಾಪ್ ಚಾಟ್‍ಗಳನ್ನು ಮಾತ್ರ ಆಧಾರವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದಿದ್ದ ನ್ಯಾಯಾಧೀಶ ವಿ ವಿ ಪಾಟೀಲ್, ಅಕ್ಟೋಬರ್ 20ರಂದು ಆರ್ಯನ್‍ಗೆ ಜಾಮೀನು  ನೀಡುವಾಗ ವಾಟ್ಸ್ಯಾಪ್ ಚಾಟ್‍ಗಳನ್ನೂ ಮುಖ್ಯ ಆಧಾರವಾಗಿರಿಸಿಕೊಂಡಿದ್ದರಲ್ಲದೆ  ಆರ್ಯನ್ ಖಾನ್ ಅವರ ವಾಟ್ಸ್ಯಾಪ್ ಚಾಟ್‍ಗಳು ಅವರು ಅಕ್ರಮ ಡ್ರಗ್ಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆಂದು ತೋರಿಸುತ್ತದೆ, ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News