ಹೊಸ ಪಕ್ಷದ ಹೆಸರು ಘೋಷಿಸಿದ ಅಮರಿಂದರ್ ಸಿಂಗ್

Update: 2021-11-02 16:48 GMT

ಹೊಸದಿಲ್ಲಿ,ನ.2: ಪಂಜಾಬಿನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್(78) ಅವರು ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಸಿಂಗ್ ಪತ್ರದಲ್ಲಿ ಪಕ್ಷ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ,ಪುತ್ರ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಸರಣಿ ಆರೋಪಗಳನ್ನು ಹೊರಿಸಿದ್ದಾರೆ.

ತನ್ನ ಏಳು ಪುಟಗಳ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿರುವ ಅವರು ತನ್ನ ಹೊಸ ಪಕ್ಷವನ್ನು ‘ಪಂಜಾಬ ಲೋಕ ಕಾಂಗ್ರೆಸ್’ಎಂದು ಹೆಸರಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ರಾಹುಲ್ ಮತ್ತು ಪ್ರಿಯಾಂಕಾ ‘ಅಸ್ಥಿರ ವ್ಯಕ್ತಿ’ ಮತ್ತು ‘ಪಾಕಿಸ್ತಾನದ ಹಿಂಬಾಲಕ ’ರಾಗಿರುವ ನವಜೋತ ಸಿಂಗ್ ಸಿಧು ಅವರನ್ನು ನಿಯಂತ್ರಿಸುವ ಬದಲು ಅವರನ್ನು ಬೆಂಬಲಿಸಿದ್ದರು ಎಂದು ದಶಕಗಳಿಂದಲೂ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಸಿಂಗ್ ಹೇಳಿದ್ದಾರೆ.

ಪಕ್ಷದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಹರೀಶ ರಾವತ್ ಅವರ ಕುಮ್ಮಕ್ಕು ಹೊಂದಿದ್ದ ಈ ವ್ಯಕ್ತಿಯ ಕುತಂತ್ರಗಳ ಬಗ್ಗೆ ನೀವು ಕುರುಡಾಗಿದ್ದೀರಿ ಎಂದು ಸಿಂಗ್ ಸೋನಿಯಾರನ್ನು ದೂಷಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಉಲ್ಲೇಖಿಸಿರುವ ಸಿಂಗ್,ತನ್ನನ್ನು ತೃಣೀಕರಿಸುವ ಮತ್ತು ಅವಹೇಳನಗೊಳಿಸುವ ಉದ್ದೇಶ ತನಗೆ ಅರ್ಥವಾಗಿತ್ತು. ಮರುದಿನವೇ ಸೋನಿಯಾ ತನಗೆ ಕರೆ ಮಾಡಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎಂದು ಬರೆದಿದ್ದಾರೆ.

‘1975 ಜೂನ್‌ನಲ್ಲಿ ಹೇರಲಾಗಿದ್ದ ತುರ್ತು ಸ್ಥಿತಿಯಂತಹ ಸರ್ಕಸ್ ಮಾಡದಿದ್ದರೆ ನಾನು ಶಾಸಕರನ್ನು ಯಾವುದಾದರೂ ರೆಸಾರ್ಟ್‌ಗೆ ಸಾಗಿಸುತ್ತೇನೆ ಎಂದು ನೀವು ಬಹುಶಃ ಭಾವಿಸಿದ್ದೀರಿ. ನನ್ನ ಸಾರ್ವಜನಿಕ ಬದುಕಿನ 52 ವರ್ಷಗಳ ಕಾಲ ನನ್ನನ್ನು,ಅದೂ ವೈಯಕ್ತಿಕ ಮಟ್ಟದಲ್ಲಿ ಚೆನ್ನಾಗಿ ಅರಿತಿದ್ದ ನೀವು ಎಂದೂ ನನ್ನನ್ನಾಗಲೀ ನನ್ನ ವ್ಯಕ್ತಿತ್ವವನ್ನಾಗಲೀ ಅರ್ಥ ಮಾಡಿಕೊಂಡಿರಲಿಲ್ಲ. ನಾನು ವರ್ಷಗಳಿಂದಲೂ ಅಧಿಕಾರದಲ್ಲಿದ್ದೇನೆ ಮತ್ತು ನನಗೆ ವಿಶ್ರಾಂತಿ ನೀಡಬೇಕೆಂದು ನೀವು ಯೋಚಿಸಿದ್ದಿರಿ’ ಎಂದು ಸಿಂಗ್ ಸೋನಿಯಾರನ್ನುದ್ದೇಶಿಸಿ ಹೇಳಿದ್ದಾರೆ.

ರಾಜೀವ ಗಾಂಧಿಯವರನ್ನು ಉಲ್ಲೇಖಿಸಿರುವ ಅವರು, ನಿಮ್ಮ ಮತ್ತು 67 ವರ್ಷಗಳ ಹಿಂದೆ 1954ರಿಂದ ಶಾಲಾದಿನಗಳಿಂದಲೂ ನಾನು ಮತ್ತು ರಾಜೀವ ಜೊತೆಯಾಗಿಯೇ ಇದ್ದ ಹಿನ್ನೆಲೆಯಲ್ಲಿ ನನ್ನ ಸ್ವಂತ ಮಕ್ಕಳಂತೆ ಈಗಲೂ ನಾನು ಪ್ರೀತಿಸುವ ನಿಮ್ಮ ಮಕ್ಕಳ ವರ್ತನೆ ನನಗೆ ಆಳವಾದ ನೋವನ್ನುಂಟು ಮಾಡಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನನಗೆ ಆಗಿರುವ ಅವಮಾನದ ಸ್ಥಿತಿ ಇತರ ಯಾವುದೇ ಹಿರಿಯ ಕಾಂಗ್ರೆಸ್ ನಾಯಕರಿಗೆ ಬರದಿರಲಿ ಎಂದು ನಾನು ಆಶಿಸುತ್ತೇನೆ ’ಎಂದು ಸಿಂಗ್ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News